– ಆರ್‌ಎಸ್‌ಎಸ್ ಮಸೂದೆ ಬಿಟ್ಟು ಜನರ ಸಮಸ್ಯೆ ಬಗೆಹರಿಸಿ
– ನೈಸ್ ಯೋಜನೆ ಕೋರ್ಟ್ ಆದೇಶ ಜಾರಿಗೆ ಪತ್ರ
ಬಾಗಲಕೋಟೆ: ಹಾನೂರಿನಲ್ಲಿ ಶೂಟೌಟ್(Hanur Shootout) ನಡೆದಿರುವುದು ಖಂಡನೀಯ. ಬೇಟೆಗೆ ಬಂದವರು ವೀರಪ್ಪನ್(Veerappan) ಮಟ್ಟದವರೇನು? ಅವರನ್ನು ಬಂಧಿಸಬಹುದಿತ್ತು. ಅಗತ್ಯವಿದ್ದರೆ ಕಾಲಿಗೆ ಗುಂಡು ಹಾರಿಸಿ ಹಿಡಿಯಬಹುದಿತ್ತು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.

ಗುಂಡಿನ ದಾಳಿ ಪ್ರಕರಣದ ಕುರಿತು ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ಅವರು, ಒಂದೇ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆ ಸೇರಿರುವುದು ಗಂಭೀರ ವಿಚಾರ ಎಂದರು.
ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಹೇಳುತ್ತಿದ್ದಾರೆ. ಆದರೆ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎನ್ನುವುದಾದರೆ ಘಟನೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಘಟನೆಯ ಸಂಪೂರ್ಣ ಸತ್ಯಾಂಶ ತನಿಖೆಯಿಂದ ಹೊರಬರಬೇಕು ಎಂದು ಅವರು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಕೋಟಕಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೈಮಗ್ಗ ಉತ್ಪನ್ನಗಳ ತಯಾರಿಕೆ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಕೆಲಸ ಮಾಡುತ್ತಿರುವ ಅಕ್ಕತಂಗಿಯರು, ಅಣ್ಣತಮ್ಮಂದಿರ ಜತೆ ಕೆಲಕಾಲ ಮಾತುಕತೆ ನಡೆಸಿದೆ.
ಈ ಕೈಮಗ್ಗ ಕೇಂದ್ರಕ್ಕೆ ಭೇಟಿ ನೀಡಿದ್ದು ಬಹಳ ವಿಶೇಷ ಎನಿಸಿತು. ಸಂಘದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ… pic.twitter.com/oRcWfnnpqb
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) August 16, 2026
ಜನರ ಸಮಸ್ಯೆ ಬಗೆಹರಿಸಿ:
ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ಗೆ (RSS) ಸಂಬಂಧಿಸಿದ ಮಸೂದೆ ಕುರಿತು ಚರ್ಚೆ ನಡೆಸುವ ಮೊದಲು ರಾಜ್ಯದ ಜನರ ಸಮಸ್ಯೆಗಳತ್ತ ಗಮನಹರಿಸಬೇಕು. ಕಲಬುರಗಿ, ಯಾದಗಿರಿ, ರಾಯಚೂರು ಭಾಗಗಳಲ್ಲಿ ಮಳೆ ಕೊರತೆಯಿಂದ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರನ್ನು ಕಳುಹಿಸಿದರೆ ಹೊಲದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದಷ್ಟೇ ಆಗಬಾರದು ಎಂದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಒಂದು ಜಿಲ್ಲೆಗೆ ಬರ ಪರಿಹಾರಕ್ಕಾಗಿ 500 ಕೋಟಿ ರೂ. ಅಗತ್ಯವಿದೆ ಎಂದಿದ್ದಾರೆ. ಹಾಗಾದರೆ ಪ್ರತಿ ಜಿಲ್ಲೆಗೆ ಸರ್ಕಾರ ಎಷ್ಟು ಹಣ ಮೀಸಲಿಟ್ಟಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಕೋಟಕಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೈಮಗ್ಗ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ನೆರವೇರಿಸಿದೆ.
ಕೈಮಗ್ಗ ಉತ್ಪನ್ನಗಳಿಗೆ ಹಾಗೂ ನೇಕಾರ ಸಮುದಾಯಕ್ಕೆ ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರ ದೂರದೃಷ್ಟಿ ನಾಯಕತ್ವದಲ್ಲಿ ಅನೇಕ… pic.twitter.com/LTOAnuVQEQ
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) August 16, 2026
ಬಿಡದಿ ಹೋರಾಟಕ್ಕೆ ಬೆಂಬಲ:
ಬಿಡದಿ ಭಾಗದ ರೈತರು ಸುಮಾರು 500ಕ್ಕೂ ಹೆಚ್ಚು ದಿನಗಳಿಂದ ಭೂಮಿ ನೀಡುವುದಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ರೈತರ ಪರವಾಗಿ ಜೆಡಿಎಸ್ ಮೊದಲಿನಿಂದಲೂ ನಿಂತಿದೆ. ಜೆಡಿಎಸ್ ರೈತ ಪರ ಪಕ್ಷವಾಗಿದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹೋರಾಟ ನಡೆಸುತ್ತದೆ ಎಂದರು.
ಪತ್ರ ಬರೆದಿದ್ದೇನೆ:
ನೈಸ್ ರಸ್ತೆ (Nice Road) ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಜುಲೈ 28ರಂದೇ ನ್ಯಾಯಾಲಯದ ಆದೇಶ ಬಂದಿದ್ದರೂ, ಸರ್ಕಾರ ಇನ್ನೂ ಅದನ್ನು ನೋಡಿಲ್ಲ ಎನ್ನುವುದು ಆಶ್ಚರ್ಯಕರವಾಗಿದೆ. ಕಳೆದ ಹಲವು ವರ್ಷಗಳಿಂದ ರೈತರ ಭೂಮಿಯನ್ನು ವಶಪಡಿಸಿಕೊಂಡರೂ ಪರಿಹಾರ ನೀಡಿಲ್ಲ. ಪತ್ರವನ್ನು ಪರಿಶೀಲಿಸಿ ಕಾನೂನಿನ ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
