ಬೆಂಗಳೂರು: ನಗರದ ಐಷಾರಾಮಿ ಹೋಟೆಲ್ (Hotel), 3 ಸ್ಟಾರ್, 5 ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ಸತತ ದಾಳಿ ನಡೆಸಿ ಹೋಟೆಲ್ ಕಿಚನ್‌ಗಳ ಕರ್ಮಕಾಂಡವನ್ನ ಬಯಲಿಗೆಳೆದಿದ್ದರು. ಹೋಟೆಲ್‌ಗಳ ಕಿಚನ್‌ನಲ್ಲಿ ಹುಳು ಬಿದ್ದ ಆಹಾರ, ಪದಾರ್ಥಗಳ ಮೇಲೆ ಜಿರಳೆ ಓಡಾಟ, ಅಡುಗೆ ಕೋಣೆಯಲ್ಲಿ ಇಲ್ಲದ ಶುಚಿತ್ವ, ಆಹಾರ ಸಂಗ್ರಹಣೆಯಲ್ಲೂ ನಿಯಮ ಪಾಲಿಸದ್ದು ಬೆಳಕಿಗೆ ಬಂದಿತ್ತು. ಇದೀಗ ಮುಂದುವರೆದು ಹೋಟೆಲ್ ನಂತರ ನಾಳೆಯಿಂದ ಜಿಬಿಎ (GBA) ವ್ಯಾಪ್ತಿಯಲ್ಲಿರುವ ಪಿಜಿ, ರೆಸ್ಟೋರೆಂಟ್, ಹಾಸ್ಟೆಲ್‌ಗಳ ಮೇಲೆ ದಾಳಿ ನಡೆಯಲಿದೆ.


ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಹಾಗೂ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪಿಜಿ, ಹಾಸ್ಟೆಲ್ (PG Hostel), ಹೋಟೆಲ್, ರೆಸ್ಟೋರೆಂಟ್, ಡಾಬಾ ಸೇರಿದಂತೆ ಎಲ್ಲಾ ಆಹಾರ ತಯಾರಿಕೆ ಕೇಂದ್ರಗಳನ್ನ ಕಾರ್ಯಾಚರಣೆಯ ಮೂಲಕ ತಪಾಸಣೆ ಮಾಡಿ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಜನರಿಂದ ದೂರು ಬಂದ ಹಿನ್ನೆಲೆ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪಿಜಿ, ಹಾಸ್ಟೆಲ್‌ಗಳ ಮೇಲೆ ದಾಳಿಗೆ ಸೂಚಿಸಲಾಗಿದೆ.
ಪಿಜಿಗಳ ತಪಾಸಣೆಗೆ ಜಂಟಿ ತಂಡ ರಚನೆ
ಪಿಜಿ ವಸತಿಗೃಹಗಳ ತಪಾಸಣೆಗಾಗಿ ಉಪ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರ ಅಧಿಕಾರಿಗಳನ್ನು ಒಳಗೊಂಡ ಜಂಟಿ ತಂಡ ರಚಿಸಲಾಗಿದೆ. ಪ್ರತಿಯೊಂದು ಪಿಜಿಗಳ ಕಾರ್ಯಚಟುವಟಿಕೆ ಬಗ್ಗೆ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘಿಸಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಪಿಜಿಯಲ್ಲಿ ಏನೆಲ್ಲ ಪರಿಶೀಲನೆ..?
> ಆಹಾರ ತಯಾರಿಕಾ ಸ್ಥಳಗಳಲ್ಲಿನ ಶುಚಿತ್ವ
> ನೈರ್ಮಲ್ಯ, ನೀರು ಮತ್ತು ಒಳಚರಂಡಿ ವ್ಯವಸ್ಥೆ
> ಕಟ್ಟಡ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆಗೆ ಆದ್ಯತೆ
> ವ್ಯಾಪಾರ ಪರವಾನಗಿ ಮತ್ತು ಅನುಮತಿ
> ಘನತ್ಯಾಜ್ಯ ನಿರ್ವಹಣೆ ಬಗ್ಗೆಯೂ ಕಟ್ಟುನಿಟ್ಟಿನ ಪರಿಶೀಲನೆ
> ಸಾರ್ವಜನಿಕ ಆಸ್ತಿ ಒತ್ತುವರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ
ಹೀಗೆ ಎಲ್ಲ ಪರಿಶೀಲನೆ ಬಳಿಕ ನಿಯಮ ಉಲ್ಲಂಘನೆ ಕಂಡು ಬಂದರೆ. ಅವಧಿ ಮೀರಿದ ಆಹಾರ ಬಳಕೆ ಕಂಡುಬಂದರೆ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದ್ದಾರೆ.
ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ
ಬೆಂಗಳೂರಿನ ನಂತರ ಜಿಲ್ಲಾದ್ಯಂತ ಆಹಾರ ಸುಕ್ಷರತಾ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ಮುಂದುವರಿಸಿದ್ದಾರೆ. ಮೈಸೂರು ತಾಲೂಕು ಹಾಗೂ ನಂಜನಗೂಡು ತಾಲೂಕಿನಲ್ಲಿ ಒಟ್ಟು 3 ರೆಸಾರ್ಟ್‌ಗಳ ಮೇಲೆ ದಾಳಿ ಮಾಡಲಾಗಿದೆ. ತಪಾಸಣೆ ವೇಳೆ ಒಟ್ಟು 16 ಕೆಜಿ ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಹಿನ್ನೆಲೆ ನೋಟಿಸ್ ನೀಡಲಾಗಿದೆ. ಇನ್ನು ನಾಲ್ಕು ಹೋಟೆಲ್‌ಗಳ ಮೇಲೂ ದಾಳಿ ಮಾಡಲಾಗಿದೆ.
