ಹಾವೇರಿ: ಜಿಲ್ಲೆಯ ಕಬ್ಬು (Sugar Growers) ಬೆಳೆಗಾರರ ನಿರಂತರ ಹೋರಾಟಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ, ಕಬ್ಬು ದರ ನಿಗದಿ ಕುರಿತು ನಾಳೆ ಹಾವೇರಿಯ ದೇವಗಿರಿ ಬಳಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ನಿರ್ಣಾಯಕ ಸಭೆ ನಡೆಯಲಿದೆ.
ಸಭೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಸಭೆಯಲ್ಲಿ, ಜಿ.ಎಂ. ಶುಗರ್ಸ್ ಮತ್ತು ವಿಐಎಂಪಿ (VIMP) ಸಕ್ಕರೆ ಕಾರ್ಖಾನೆಗಳ ಮಾಲೀಕರು ಪಾಲ್ಗೊಳ್ಳಲಿದ್ದಾರೆ.
ರೈತರ ಪರವಾಗಿ ಮುಖಂಡರಾದ ಚೂನಪ್ಪ ಪೂಜೇರಿ, ಶಶಿಕಾಂತ ಗುರೂಜಿ, ಅಶೋಕರೆಡ್ಡಿ ಮರಚರೆಡ್ಡಿ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದು, ಡಿಸಿ ಕಚೇರಿ ಮುಂಭಾಗ ನೂರಾರು ರೈತರು ಜಮಾಯಿಸುವ ನಿರೀಕ್ಷೆಯಿದೆ.
ಬೆಲೆ ನಿಗದಿ ಪಟ್ಟು
ಪ್ರತಿ ಟನ್ ಕಬ್ಬಿಗೆ 3,600 ರೂ. ದರ ನಿಗದಿಪಡಿಸಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ, ಈ ಹಿಂದೆ ಜಿ.ಎಂ. ಶುಗರ್ಸ್ 3,000 ರೂ. ಹಾಗೂ ಹೆಬ್ಬಾರ್ ಕಾರ್ಖಾನೆ 3,100 ರೂ. ನೀಡಲು ಮಾತ್ರ ಒಪ್ಪಿದ್ದರಿಂದ ಆಕ್ರೋಶಗೊಂಡ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ, ಪೂರ್ವನಿಗದಿತ ಜವಳಿ ಇಲಾಖೆಯ ಸಭೆಯ ನಿಮಿತ್ತ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಬೆಂಗಳೂರಿಗೆ ತೆರಳುತ್ತಿರುವುದರಿಂದ ನಾಳಿನ ಈ ಮಹತ್ವದ ಸಭೆಗೆ ಗೈರಾಗಲಿದ್ದಾರೆ.ಇದನ್ನೂ ಓದಿ: ಬಸವಣ್ಣನ ಕುರಿತು ಅವಹೇಳನಕಾರಿ ಬರಹ; ವಿಚಾರಣೆಗೆ ಹಾಜರಾಗುವಂತೆ ಲೇಖಕ ರವಿ ಹಂಜ್ಗೆ ನೋಟಿಸ್
ಡಿಸಿ ಕಚೇರಿ ಸುತ್ತ ಖಾಕಿ ಸರ್ಪಗಾವಲು
ರೈತರ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಗಾಗಿ 2 ಸಿಪಿಐ, 8 ಪಿಎಸ್ಐ, 8 ಎಎಸ್ಐ, 55 ಪೊಲೀಸ್ ಸಿಬ್ಬಂದಿ, 10ಕ್ಕೂ ಅಧಿಕ ಮಹಿಳಾ ಪೊಲೀಸರು ಹಾಗೂ 2 ಡಿ.ಆರ್. (DR) ತುಕಡಿ ವಾಹನಗಳನ್ನು ನಿಯೋಜಿಸಲಾಗಿದೆ. ನಾಳಿನ ಸಭೆಯಲ್ಲಿ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗಲಿದೆಯೇ ಅಥವಾ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಗೆ ಕಾಡಾನೆಗಳನ್ನು ಅಟ್ಟಿದ್ದಕ್ಕೆ ಆಕ್ರೋಶ – ಮೂವರು ಶಾಸಕರಿಂದ ರಾಜೀನಾಮೆ ಎಚ್ಚರಿಕೆ
