ನವದೆಹಲಿ: ಭಯೋತ್ಪಾದನೆ(Terrorists) ವಿರುದ್ಧದ ಹೋರಾಟವನ್ನು ಭಾರತ ಮತ್ತಷ್ಟು ತೀವ್ರಗೊಳಿಸಿದೆ. ಅದರಂತೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪಾಕಿಸ್ತಾನ ಮೂಲದ 23 ಮಂದಿಯನ್ನು ಉಗ್ರರು ಎಂದು ಅಧಿಕೃತವಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯ ಪ್ರಕಾರ, ಈ 23 ಮಂದಿಯ ಹೆಸರನ್ನು ಯುಎಪಿಎ ಕಾಯ್ದೆಯ ನಾಲ್ಕನೇ ಅನುಸೂಚಿಗೆ ಸೇರಿಸಲಾಗಿದೆ. ಇವರು ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಹಾಗೂ ಅವುಗಳ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
ಭಾರತದಲ್ಲಿ ನಡೆದ ವಿವಿಧ ಭಯೋತ್ಪಾದಕ ಕೃತ್ಯಗಳು, ಗಡಿ ನುಸುಳುವಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಉಗ್ರರ ನೇಮಕಾತಿ ಹಾಗೂ ಉಗ್ರ ಚಟುವಟಿಕೆಗಳಿಗೆ ಹಣಕಾಸು ಮತ್ತು ಲಾಜಿಸ್ಟಿಕ್ ಬೆಂಬಲ ನೀಡಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಸಿನಿಮಾ, ವೆಬ್‌ಸಿರೀಸ್‌ಗಳ ಪೈರಸಿ – ಟೆಲಿಗ್ರಾಂಗೆ ಕೇಂದ್ರದಿಂದ ನೋಟಿಸ್
ಘೋಷಿತ ಉಗ್ರರ ಪಟ್ಟಿಯಲ್ಲಿರುವ ಹಲವರು ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಉಗ್ರ ದಾಳಿಗಳು ಹಾಗೂ ಗಡಿ ದಾಟಿ ನಡೆಸಿದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಈ 23 ಮಂದಿಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್ ಅವರ ಆಪ್ತರು ಎಂದು ಹೇಳಲಾಗಿದೆ. ಅಬ್ದುಲ್ ರೌಫ್, ಹಫೀಜ್ ಖಾಲಿದ್ ಹಾಗೂ ರಾಣಾ ಇಫ್ತಿಕರ್ ಅವರ ಹೆಸರುಗಳು ಪಟ್ಟಿಯಲ್ಲಿವೆ.
ಯುಎಪಿಎ ಕಾಯ್ದೆಯಡಿ ಒಬ್ಬ ವ್ಯಕ್ತಿಯನ್ನು ಉಗ್ರನೆಂದು ಘೋಷಿಸಿದ ಬಳಿಕ, ಆತನ ಆಸ್ತಿಪಾಸ್ತಿಗಳ ಮೇಲೆ ನಿಗಾ ವಹಿಸುವುದು, ಹಣಕಾಸಿನ ಮೂಲಗಳನ್ನು ನಿರ್ಬಂಧಿಸುವುದು ಹಾಗೂ ತನಿಖಾ ಸಂಸ್ಥೆಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ದೊರೆಯುತ್ತದೆ.ಇದನ್ನೂ ಓದಿ: ಯುದ್ಧಕ್ಕೆ ಖಮೇನಿಯ 14 ತಿಂಗಳ ಮೊಮ್ಮಗಳೂ ಬಲಿ – ತಾತನ ಜೊತೆ ಮಗುವಿನ ಪುಟ್ಟ ಶವಪೆಟ್ಟಿಗೆ ರಿವೀಲ್
