-15 ದಿನಗಳೊಳಗೆ ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸಲು ಸೂಚನೆ
ನವದೆಹಲಿ: ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳ ಪೈರಸಿ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಟೆಲಿಗ್ರಾಂಗೆ (Telegram) ನೋಟಿಸ್ ನೀಡಿದೆ. ಕಾನೂನುಬಾಹಿರ ಸಿನಿಮಾ, ಒಟಿಟಿ ಕಂಟೆಂಟ್ ವಿರುದ್ಧ ಕ್ರಮ ಕೈಗೊಂಡು, ಆ ವರದಿಯನ್ನು 15 ದಿನದೊಳಗೆ ಸಲ್ಲಿಸುವಂತೆ ತಿಳಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Information and Broadcasting Ministry) ಈ ನೋಟಿಸ್ ನೀಡಿದ್ದು, ಟೆಲಿಗ್ರಾಂನಲ್ಲಿ ಹರಿದಾಡುತ್ತಿರುವ ಪೈರೇಟೆಡ್ ಚಲನಚಿತ್ರಗಳು ಮತ್ತು ಒಟಿಟಿ ಕಂಟೆಂಟ್‌ಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಟೆಲಿಗ್ರಾಂನ ವಿವಿಧ ಚಾನೆಲ್‌ಗಳು ಮತ್ತು ಗುಂಪುಗಳ ಮೂಲಕ ಹೊಸ ಚಲನಚಿತ್ರಗಳು, ಒಟಿಟಿ ವೇದಿಕೆಗಳ ವಿಷಯಗಳು ಹಾಗೂ ಇತರೆ ಆಡಿಯೋ-ವಿಜುವಲ್ ಕೃತಿಗಳು ಅನಧಿಕೃತವಾಗಿ ಹಂಚಲಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುದ್ಧಕ್ಕೆ ಖಮೇನಿಯ 14 ತಿಂಗಳ ಮೊಮ್ಮಗಳೂ ಬಲಿ – ತಾತನ ಜೊತೆ ಮಗುವಿನ ಪುಟ್ಟ ಶವಪೆಟ್ಟಿಗೆ ರಿವೀಲ್
ಈ ಹಿಂದೆ ಕೇಂದ್ರವು 3,000ಕ್ಕೂ ಹೆಚ್ಚು ಟೆಲಿಗ್ರಾಮ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಇದೀಗ ಸರ್ಕಾರವು ಕೇವಲ ಪ್ರತ್ಯೇಕ ಪೈರಸಿ ಲಿಂಕ್‌ಗಳು ಅಥವಾ ಚಾನೆಲ್‌ಗಳನ್ನು ತೆಗೆದುಹಾಕುವ ಕ್ರಮಕ್ಕೆ ಸೀಮಿತವಾಗದೇ, ಸಂಪೂರ್ಣ ವೇದಿಕೆಯ ಜವಾಬ್ದಾರಿಯತ್ತ ಗಮನ ಹರಿಸಿದೆ. ಪೈರಸಿ ತಡೆಗೆ ಟೆಲಿಗ್ರಾಂ ಯಾವ ಕ್ರಮಗಳನ್ನು ಕೈಗೊಂಡಿದೆ? ಮುಂದಿನ ದಿನಗಳಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಯಾವ ವ್ಯವಸ್ಥೆ ರೂಪಿಸಲಿದೆ ಎಂಬುದನ್ನು 15 ದಿನಗಳೊಳಗೆ ವಿವರಿಸಬೇಕಾಗಿದೆ.

ಸರ್ಕಾರದ ಸೂಚನೆಯಲ್ಲಿ ಏನಿದೆ?
- ಪೈರೇಟೆಡ್ ಚಲನಚಿತ್ರಗಳು ಮತ್ತು ಹಕ್ಕುಸ್ವಾಮ್ಯ (Copy Right) ಉಲ್ಲಂಘಿಸುವ ವಿಷಯ ವಸ್ತುಗಳನ್ನು ಯಾರಾದರೂ ಅಪ್‌ಲೋಡ್ ಮಾಡಿದಾಗ ಪತ್ತೆಹಚ್ಚಲು, ವರದಿ ಮಾಡಲು, ಇಂತಹ ವಿಷಯಗಳು ಯಾರಿಗೂ ಸಿಗದಂತೆ ತಕ್ಷಣವೇ ಅವುಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಅಂತಹ ಕಾನೂನುಬಾಹಿರ ಫೈಲ್ ಮತ್ತು ವಿಡಿಯೋಗಳನ್ನು ಟೆಲಿಗ್ರಾಮ್ ತನ್ನ ಸರ್ವರ್‌ನಿಂದ ಡಿಲೀಟ್ ಮಾಡುವ ವ್ಯವಸ್ಥೆಯನ್ನು ಬಲಪಡಿಸಬೇಕು.
- ಚಾನೆಲ್‌ಗಳು, ಗ್ರೂಪ್‌ಗಳು, ಬಾಟ್‌ಗಳು, ಖಾತೆಗಳು, ಅಡ್ಮಿನ್‌ಗಳು ಸೇರಿದಂತೆ ಯಾರೇ ಕಾನೂನು ಬಾಹಿರ ವಿಷಯಗಳನ್ನು ಪದೇ ಪದೇ ಉಲ್ಲಂಘಿಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.
- ಟೆಲಿಗ್ರಾಮ್ ಒಂದು ಮಧ್ಯವರ್ತಿಯಾಗಿ, ಐಟಿ ಕಾಯ್ದೆ 2000 ಮತ್ತು ಐಟಿ ನಿಯಮಗಳ 2021ರ ಅಡಿಯಲ್ಲಿ ಜಾಗರೂಕರಾಗಿರಬೇಕು. ಅದರ ಬದಲಿಗೆ ಪ್ರತಿಯೊಂದು ಪೈರಸಿ ಚಾನೆಲ್ ಅನ್ನು ಸರ್ಕಾರವೇ ಒಂದೊಂದಾಗಿ ಗುರುತಿಸುವವರೆಗೆ ಟೆಲಿಗ್ರಾಮ್ ಕಾಯುತ್ತಾ ಇರಬಾರದು ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
- ಹಕ್ಕುಸ್ವಾಮ್ಯ ಉಲ್ಲಂಘನೆಯು ಭಾರತದಲ್ಲಿ ಹಕ್ಕುಸ್ವಾಮ್ಯ ಕಾಯ್ದೆ 1957 ಮತ್ತು ಸಿನಿಮಾಟೋಗ್ರಾಫ್ ಕಾಯ್ದೆ 1952ರ ಅಡಿಯಲ್ಲಿ ಒಂದು ಕ್ರಿಮಿನಲ್ ಅಪರಾಧ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒತ್ತಿಹೇಳಿದೆ.
- ಭಾರತದ ಸೃಜನಶೀಲರ ಆರ್ಥಿಕತೆ, ಚಲನಚಿತ್ರ ಉದ್ಯಮ, ಪ್ರಸಾರಕರು, ಒಟಿಟಿ ಪ್ಲಾಟ್ಫಾರ್ಮ್‌ಗಳು, ನಿರ್ಮಾಪಕರು ಮತ್ತು ವಿತರಕರನ್ನು ರಕ್ಷಿಸಲು ಈ ಕ್ರಮ ಕೈಗೊಂಡಿದೆ.
ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂ ಮೂಲಕ ಪೈರಸಿ (Piracy) ಪ್ರತಿಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಭಾರೀ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಒಟಿಟಿ ಸಂಸ್ಥೆಗಳು ಮತ್ತು ಚಿತ್ರರಂಗದ ಪ್ರತಿನಿಧಿಗಳಿಳು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಸರ್ಕಾರ ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆ.
ನಿಗದಿತ ಅವಧಿಯಲ್ಲಿ ಟೆಲಿಗ್ರಾಂ ಸಮರ್ಪಕ ಉತ್ತರ ನೀಡದಿದ್ದರೆ ಅಥವಾ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಮುಂದಿನ ಕ್ರಮಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:480 ಕೋಟಿ ರೂ. ವೆಚ್ಚದ ಜೋಧ್‌ಪುರ ಏರ್‌ಪೋರ್ಟ್ ಟರ್ಮಿನಲ್ ಉದ್ಘಾಟಿಸಿದ ಮೋದಿ
