ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ (Ali Khamenei) ಅಂತ್ಯಕ್ರಿಯೆ ಸಮಾರಂಭಗಳು ಶನಿವಾರ ಟೆಹ್ರಾನ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾಗಿವೆ. ಖಮೇನಿ ಶವಪೆಟ್ಟಿಗೆ ಪಕ್ಕದಲ್ಲೇ ಮತ್ತೊಂದು ಪುಟ್ಟ ಶವಪೆಟ್ಟಿಗೆ ಇದ್ದು, ಅದು ಸರ್ವೋಚ್ಚ ನಾಯಕನ 14 ತಿಂಗಳ ಮೊಮ್ಮಗಳದ್ದು ಎಂಬುದು ಗೊತ್ತಾಗಿದೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಖಮೇನಿ ಹತ್ಯೆಗೀಡಾಗಿದ್ದರು. 86 ವರ್ಷದ ನಾಯಕನಿಗೆ ಗೌರವ ಸಲ್ಲಿಸಲು ಸಾವಿರಾರು ಇರಾನಿಯನ್ನರು ಸೇರಿದ್ದರು. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೆ ಮಗ ಮೊಜ್ತಬಾ ಹೋಗಲ್ಲ – ಭಾರತದಿಂದ ಭಾಗವಹಿಸೋದ್ಯಾರು?
ಖಮೇನಿ ಶವಪೆಟ್ಟಿಗೆಯನ್ನು ಸಂಕೀರ್ಣಕ್ಕೆ ಕೊಂಡೊಯ್ಯಲಾಯಿತು. ಇಸ್ಲಾಮಿಕ್ ಗಣರಾಜ್ಯದ ಧ್ವಜವನ್ನು ಹೊದಿಸಿ, ಅದರ ಮೇಲೆ ಕಪ್ಪು ಪೇಟವನ್ನು ಇರಿಸಲಾಯಿತು. ಮೃತ ಸಂಬಂಧಿಕರ ಶವಗಳನ್ನು ಖಮೇನಿ ಪಕ್ಕದಲ್ಲೇ ಇರಿಸಲಾಯಿತು. ಅವುಗಳ ಪೈಕಿ 14 ತಿಂಗಳ ಮೊಮ್ಮಗಳ ಸಣ್ಣ ಶವಪೆಟ್ಟಿಗೆಯೂ ಇದೆ.
ಇರಾನ್ ಮತ್ತು ಇರಾಕ್‌ನಾದ್ಯಂತ ಆರು ದಿನಗಳ ಸಾರ್ವಜನಿಕ ಅಂತ್ಯಕ್ರಿಯೆ ಸಮಾರಂಭಗಳಿಗಾಗಿ ಖಮೇನಿಯವರ ಪಾರ್ಥಿವ ಶರೀರವನ್ನು ಶುಕ್ರವಾರ ಟೆಹ್ರಾನ್‌ಗೆ ತರಲಾಯಿತು. ಅವರ ಪಾರ್ಥಿವ ಶರೀರವನ್ನು ಇರಾನ್ ಮತ್ತು ನೆರೆಯ ಇರಾಕ್‌ನ ನಗರಗಳಲ್ಲಿ ಸಾಗಿಸಲಾಗುವುದು. ಇಸ್ಲಾಮಿಕ್ ಗಣರಾಜ್ಯದ ನೂರಾರು ಬೆಂಬಲಿಗರು ಶುಕ್ರವಾರ ಸಂಜೆ ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದ ಹೊರಗೆ ಸಾರ್ವಜನಿಕರಿಗೆ ಮುಕ್ತವಾಗಲು ಕಾಯುತ್ತಿದ್ದರು. ಮುಂದಿನ ಮೂರು ದಿನಗಳಲ್ಲಿ ಟೆಹ್ರಾನ್‌ನಲ್ಲಿ ಮಾತ್ರ 1.50 ಯಿಂದ 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಮಹಿಳೆಯರ ಮೇಲೆ ಗ್ಯಾಂಗ್ ರೇಪ್ – ಪಾಕಿಸ್ತಾನ ಉಪಪ್ರಧಾನಿ ಸಂಬಂಧಿ ಅರೆಸ್ಟ್
