ಕೋಲ್ಕತ್ತಾ: ಸುಮಾರು ಎರಡು ದಶಕಗಳ ಹಿಂದೆ ತೀವ್ರ ರೈತ ಹೋರಾಟದಿಂದಾಗಿ ಟಾಟಾ ನ್ಯಾನೋ ಕಾರು(Tata Nano Car) ಉತ್ಪಾದನಾ ಘಟಕವು ಪಶ್ಚಿಮ ಬಂಗಾಳದ ಸಿಂಗೂರ್ನಿಂದ ಕಾಲ್ಕಿತ್ತಿತ್ತು. ಇದೀಗ ಅದೇ ಐತಿಹಾಸಿಕ 997 ಎಕರೆ ಜಾಗದಲ್ಲಿ ದೇಶದ ಎರಡನೇ ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆಯಾದ ಅಶೋಕ್ ಲೇಲ್ಯಾಂಡ್(Ashok Leyland) ತನ್ನ ಟ್ರಕ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.
ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು ಈ ಮಹತ್ವದ ಘೋಷಣೆ ಮಾಡಿದ್ದು, ಬೆನ್ನಲ್ಲೇ ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಸುವೇಂದು ಅಧಿಕಾರಿ(Suvendu Adhikari) ಅವರು ಸಿಂಗೂರ್ನಲ್ಲಿ 997 ಎಕರೆ ಭೂಮಿಯನ್ನು ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಹಣಕಾಸು ಸಚಿವ ಸ್ವಪನ್ ದಾಸ್ಗುಪ್ತಾ, “ರಾಜ್ಯದ ಕೈಗಾರಿಕಾ ಮತ್ತು ಹೂಡಿಕೆ ನೀತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಅಶೋಕ್ ಲೇಲ್ಯಾಂಡ್ ಸಿಂಗೂರ್ನಲ್ಲಿ(Singur) ಘಟಕ ಸ್ಥಾಪಿಸಲು ಆಸಕ್ತಿ ತೋರಿಸಿದೆ. ಜೊತೆಗೆ ಹಲವು ರಾಸಾಯನಿಕ ಕಂಪನಿಗಳೂ ಮುಂದೆ ಬಂದಿವೆ. ಆದರೆ, ಇವೆಲ್ಲವೂ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಯಾವುದೂ ಅಂತಿಮಗೊಂಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
20 ವರ್ಷಗಳ ಹಿಂದೆ ಏನಾಗಿತ್ತು?
2006ರಲ್ಲಿ ಅಂದಿನ ಸಿಪಿಐ(ಎಂ) ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ ತರುವ ಉದ್ದೇಶದಿಂದ ಸಿಂಗೂರ್ನ 997 ಎಕರೆ ಕೃಷಿ ಭೂಮಿಯನ್ನು ನ್ಯಾನೋ ಕಾರು ನಿರ್ಮಾಣ ಮಾಡಲು ಟಾಟಾ ಮೋಟಾರ್ಸ್ಗೆ ನೀಡಲು ಮುಂದಾಗಿದ್ದರು. ಆದರೆ, ಬಲವಂತದ ಭೂಸ್ವಾಧೀನ ಆರೋಪಿಸಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ರೈತ ಸಂಘಟನೆಗಳು 26 ದಿನಗಳ ಉಪವಾಸ ಸತ್ಯಾಗ್ರಹ ಸೇರಿದಂತೆ ತೀವ್ರ ಹೋರಾಟ ನಡೆಸಿದ್ದವು. ಇದನ್ನೂ ಓದಿ: ನ್ಯಾನೋ ಕೇಸ್, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್
ವಿಶೇಷವೆಂದರೆ, ಇಂದು ಸಿಂಗೂರ್ಗೆ ಕೈಗಾರಿಕೆ ತರಲು ಹೊರಟಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಈ ಹಿಂದೆ ಟಿಎಂಸಿಯಲ್ಲಿದ್ದಾಗ ನಂದಿಗ್ರಾಮದ ಭೂಸ್ವಾಧೀನ ವಿರೋಧಿ ಹೋರಾಟದ ಮೂಲಕವೇ ನಾಯಕರಾಗಿ ಬೆಳೆದವರು. ಇದೀಗ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ, ಬಂಗಾಳದ ಹಳೆಯ ‘ಕೈಗಾರಿಕಾ ವಿರೋಧಿ’ ಹಣೆಪಟ್ಟಿಯನ್ನು ಅಳಿಸಿಹಾಕುವ ಪಣ ತೊಟ್ಟಿದ್ದಾರೆ.
ಅಶೋಕ್ ಲೇಲ್ಯಾಂಡ್ ಇನ್ನೂ ತನ್ನ ಹೂಡಿಕೆಯ ಸ್ಪಷ್ಟ ರೂಪುರೇಷೆ ನೀಡಿಲ್ಲ. ಜೊತೆಗೆ, 2006ರಲ್ಲಿ ಎಡರಂಗ ಮಾಡಿದ ತಪ್ಪು ಮರುಕಳಿಸದಂತೆ ಅತ್ಯಂತ ಎಚ್ಚರಿಕೆಯಿಂದ ಈ 997 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ದೊಡ್ಡ ಸವಾಲು ಸುವೇಂದು ಅಧಿಕಾರಿ ಅವರ ಮುಂದಿದೆ. ಎರಡು ದಶಕಗಳ ಹಿಂದೆ ಟಾಟಾ ನ್ಯಾನೋಗೆ ವಿದಾಯ ಹೇಳಿದ್ದ ಸಿಂಗೂರ್, ಈಗ ಅಶೋಕ್ ಲೇಲ್ಯಾಂಡ್ ಅನ್ನು ಹೇಗೆ ಸ್ವಾಗತಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

