– ಒಂದು ತಿಂಗಳೊಳಗೆ ಶರಣಾಗುವಂತೆ ಆದೇಶ
ನವದೆಹಲಿ: 1994 ರಲ್ಲಿ ನಡೆದ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿ. ಕೃಷ್ಣಯ್ಯ ಅವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಆನಂದ್ ಮೋಹನ್ನ (Anand Mohan) ಅವಧಿಪೂರ್ವ ಬಿಡುಗಡೆ ಮಾಡಿದ ಬಿಹಾರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ. ಒಂದು ತಿಂಗಳೊಳಗೆ ಅಪರಾಧಿ ಶರಣಾಗುವಂತೆ ಕೋರ್ಟ್ ಆದೇಶಿಸಿದೆ.
ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕರ ಕೊಲೆಯಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡುವ ನಿರ್ಬಂಧವನ್ನು ತೆಗೆಯಲು ಬಿಹಾರ (Bihar) ಸರ್ಕಾರ ಜೈಲು ಕೈಪಿಡಿಯ ನಿಯಮ 481(1)(a) ಅನ್ನು ತಿದ್ದುಪಡಿ ಮಾಡಿತ್ತು. ಏ.10, 2023 ರಂದು ಹೊರಡಿಸಲಾದ ಈ ಅಧಿಸೂಚನೆಯನ್ನು ನ್ಯಾಯಾಲಯ ಸಂವಿಧಾನಬಾಹಿರ, ಅಮಾನ್ಯ ಎಂದು ಘೋಷಿಸಿದೆ. ಈ ಮೂಲಕ ಆನಂದ್ ಮೋಹನ್ನ ಅವಧಿಪೂರ್ವ ಬಿಡುಗಡೆ ನಿರ್ಧಾರಕ್ಕೆ ಕೋರ್ಟ್ ಬ್ರೇಕ್ ಹಾಕಿದೆ. ಇದನ್ನೂ ಓದಿ: ದರ್ಶನ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆಗೆ ಕೋರ್ಟ್ ಅನುಮತಿ
ಮೇ 8, 2023 ರಂದು, ನ್ಯಾಯಾಲಯವು ಜೈಲು ಕೈಪಿಡಿ ತಿದ್ದುಪಡಿ ಬಗ್ಗೆ ಕೇಂದ್ರ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿ ಪ್ರತಿಕ್ರಿಯೆ ಕೇಳಿತ್ತು. ಬಳಿಕ ನ್ಯಾಯಾಲಯವು ಈ ವರ್ಷ ಜು.16 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದಿಗ ಜೈಲು ಕೈಪಿಡಿ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಅಮಾನ್ಯ ಎಂದು ಘೋಷಿಸಿದೆ. ಇದೇ ವೇಳೆ, ಶಿಕ್ಷೆ ವಿನಾಯಿತಿಯನ್ನು ಪರಿಗಣಿಸಲು ಹೊಸ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸಲು ರಾಜ್ಯ ಸರ್ಕಾರ ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಏನಿದು ಪ್ರಕರಣ?
ಕೊಲೆ ಅಪರಾಧಿ ಆನಂದ್ ಮೋಹನ್ ನೇತೃತ್ವದ ಗುಂಪೊಂದು ನಡೆಸಿದ ದಾಳಿಯಲ್ಲಿ ಐಎಎಸ್ ಅಧಿಕಾರಿ ಜಿ. ಕೃಷ್ಣಯ್ಯ ಮೃತಪಟ್ಟಿದ್ದರು. ಈ ಅಪರಾಧಕ್ಕಾಗಿ ಮೋಹನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಏಪ್ರಿಲ್ 24, 2023 ರಂದು ಅವರು ಜೈಲಿನಿಂದ ಹೊರಬಂದಿದ್ದರು.
ಬಿಹಾರ ರಾಜ್ಯದ ವಿನಾಯತಿ ನೀತಿಯ ಪ್ರಕಾರ, ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕರ ಕೊಲೆಗೆ ಶಿಕ್ಷೆಗೊಳಗಾದ ವ್ಯಕ್ತಿಗಳು ಕನಿಷ್ಠ 20 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸುವವರೆಗೆ ಅಕಾಲಿಕ ಬಿಡುಗಡೆಗೆ ಅರ್ಹರಾಗಿರಲಿಲ್ಲ. ಆದಾಗ್ಯೂ, ಏಪ್ರಿಲ್ 2023 ರಲ್ಲಿ ವಿನಾಯತಿ ನೀತಿಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರವು ಈ ನಿರ್ಬಂಧವನ್ನು ತೆಗೆದುಹಾಕಿತ್ತು. ಇದು ಆನಂದ್ ಮೋಹನ್ ಅವರ ಬಿಡುಗಡೆಗೆ ದಾರಿ ಮಾಡಿಕೊಟ್ಟಿತ್ತು.
ಬಿಹಾರ ಗೃಹ ಇಲಾಖೆ (ಕಾರಾಗೃಹಗಳು) ಏಪ್ರಿಲ್ 10, 2023 ರಂದು ಹೊರಡಿಸಿದ್ದ ಸುತ್ತೋಲೆಯನ್ನು ಕೃಷ್ಣಯ್ಯ ಅವರ ಪತ್ನಿ ಉಮಾ ಕೃಷ್ಣಯ್ಯ ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್ಗೆ ನಿರೀಕ್ಷಣಾ ಜಾಮೀನು ಮಂಜೂರು
