– ಆಶಾ ಕಾರ್ಯಕರ್ತೆಯರ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸಬೇಕು
– ಇಡಿ ತನಿಖೆ ಬಾರದಿದ್ದರೆ ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕ್ತಿದ್ರಿ
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಹೇಗೆ ಕ್ಲೀನ್ ಚಿಟ್ ಕೊಟ್ರಿ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದಕ್ಕಿಂತ ಬೇಕಾ ಪ್ರಿಯಾಂಕ್ ಖರ್ಗೆ ಅವರೇ? ಸಿಬಿಐ, ಇಡಿ ಅವರು ಕೇಸ್ನಲ್ಲಿ ನಾಗೇಂದ್ರ ಅವರನ್ನು ಫಿಕ್ಸ್ ಮಾಡುತ್ತಾರೆ. ಇಲ್ಲಿ ನೀವು ಕ್ಲೀನ್ ಚಿಟ್ ಕೊಡುತ್ತೀರಾ? ಯಾರೋ ಅಧಿಕಾರಿಗಳನ್ನು ಆರೋಪಿ ಮಾಡಿದ್ದೀರಾ ಅಂತ ಕಿಡಿಕಾರಿದರು.
ಸಿಐಡಿಯಿಂದ ಏನು ಕ್ಲೀನ್ ಚಿಟ್ ಕೊಡುತ್ತಿದ್ದೀರಾ? ಯಾವ ರೀತಿ ಕೊಟ್ಟಿರಿ? ಯಾವ ಆಧಾರದಲ್ಲಿ ಕ್ಲೀನ್ ಚಿಟ್ ಕೊಟ್ಟಿರಿ? ಸಿಐಡಿ ಇವರ ಇಲಾಖೆ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ತನಿಖೆ ಮಾಡುತ್ತದೆ? ಇಲಾಖೆ ಮಂತ್ರಿ, ಸಿಎಂ ಅವರೇ ಅಕ್ರಮ ಆಗಿದೆ ಅಂತ ಸದನದಲ್ಲಿ ಒಪ್ಪಿಕೊಳ್ಳುತ್ತಾರೆ. ಎಷ್ಟು ವರ್ಷ ಆಯಿತು ವಿಷಯ ಬಂದು? ಇಷ್ಟು ದಿನ ಬೇಕಿತ್ತಾ ತನಿಖೆ ಮಾಡೋಕೆ? ಈಗ ಹೇಗೆ ಕ್ಲೀನ್ ಚಿಟ್ ಕೊಟ್ಟಿರಿ? ಅಂತ ಪ್ರಶ್ನೆ ಮಾಡಿದರು.
ಕೆಪಿಎಸ್ಸಿ (KPSC) ಅಕ್ರಮವನ್ನು ಇಡಿ ಅವರು ತೆಗೆಯದೇ ಹೋಗಿದ್ದರೆ ಸಿಐಡಿ ಅವರು ಏನು ಮಾಡುತ್ತಿದ್ದರು? ಇಡಿ ಬಾರದೇ ಹೋಗಿದ್ದರೆ ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕುತ್ತಿದ್ದಿರಿ. ಆರೋಪಿ ಐಎಎಸ್ (IAS) ಅಧಿಕಾರಿ ಜ್ಞಾನೇಂದ್ರ ದೆಹಲಿಗೆ ಹೋಗೋಕೆ ನಾನೇ ಅನುಮತಿ ಕೊಟ್ಟೆ ಅಂತ ಹೇಳಿದ್ದೀರಿ. ನನ್ನ ಅನುಮತಿ ತಗೊಂಡು ಹೋಗಿದ್ದಾರೆ ಅಂತ ಹೇಳಿಕೆ ಕೊಟ್ಟಿರಿ. ಅವತ್ತು ನೀವು ಏನು ಹೇಳಿದ್ದೀರಿ ಹೇಳಿಕೆ ತೆಗೆದು ನೋಡಿ. ಪರ್ಮಿಷನ್ ಯಾಕೆ ಆ ವ್ಯಕ್ತಿಗೆ ಕೊಟ್ಟಿರಿ? ಇಂತಹ ವ್ಯಕ್ತಿಗೆ, ನಿಮ್ಮ ಇಲಾಖೆಗೆ ಇಂತಹ ವ್ಯಕ್ತಿ ಬಗ್ಗೆ ಗೊತ್ತಿರಲಿಲ್ಲ. ಆಮೇಲೆ ಅವನನ್ನು ಎಲ್ಲಿಂದ ಕರೆದುಕೊಂಡು ಬಂದು ಅರೆಸ್ಟ್ ಮಾಡಿದರು? ಇಡಿ ತನಿಖೆ ಮಾಡಿದ್ದಕ್ಕೆ ಹೊರಗೆ ಬಂತು. ಸಿಐಡಿ ಮಾಡಿದ್ದರೆ ಏನು ಮಾಡುತ್ತಿದ್ದಿರಿ ಜನಕ್ಕೆ ಹೇಳಿ ಅಂತ ಕಿಡಿಕಾರಿದರು.
ಕೆಪಿಎಸ್ಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಕೇಸ್ ಇಡಿ ದೂರು ಕೊಟ್ಟ ವಿಚಾರಕ್ಕೆ ದಾಖಲೆ ಕೊಡಿ, ದಾಖಲೆ ಕೊಡಿ ಅಂತ ಕೇಳುತ್ತಿದ್ದಿರಿ. ಅದೇ ದಾಖಲೆ ನಾನು ಕೊಟ್ಟಿದ್ದು. ಎಇಇಗಳನ್ನು (AEE) ಅಕ್ರಮವಾಗಿ ನೇಮಕ ಮಾಡಿದ್ದರು. ತರಾತುರಿಯಲ್ಲಿ ಮಂತ್ರಿ ಆಗಿ 24 ಜನರಿಗೆ ಹೇಗೆ ನೇಮಕಾತಿ ಪತ್ರ ಕೊಟ್ಟಿರಿ? 2 ವರ್ಷ ಆಯಿತು ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ನೀವು ಯಾಕೆ ಮಾಹಿತಿ ಕೊಡದೇ ಕೋರ್ಟ್ನಲ್ಲಿ ಎರಡು ವರ್ಷಗಳಿಂದ ಮುಂದೆ ಹಾಕುತ್ತಿದ್ದೀರಾ? 24 ಜನರಿಗೆ ಯಾಕೆ ರಕ್ಷಣೆ ಕೊಟ್ಟಿರಿ? ಯಾರು ರಕ್ಷಣೆ ಕೊಟ್ಟಿದ್ದು? ಇಡಿ ದೂರು ಕೊಟ್ಟಿದೆ. ಪ್ರಿಯಾಂಕ್ ಖರ್ಗೆ ಅವರೇ ಸ್ವಲ್ಪ ಇದೆಲ್ಲವನ್ನೂ ಅರಗಿಸಿಕೊಳ್ಳೋಕೆ ಏನು ಬೇಕೋ ಅದನ್ನು ಮಾಡಿ ಅಂತ ಲೇವಡಿ ಮಾಡಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆ ರಾಜ್ಯ ಸರ್ಕಾರ ಈಡೇರಿಸಬೇಕು
ಆಶಾ ಕಾರ್ಯಕರ್ತೆಯರು 10 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರದ್ದು ನ್ಯಾಯಯುತ ಬೇಡಿಕೆ. ನಾನು ಕೇಂದ್ರ, ರಾಜ್ಯ ಸರ್ಕಾರ ಅಂತ ಟೀಕೆ ಮಾಡಲ್ಲ. ರಾಜ್ಯ ಸರ್ಕಾರ ಅವರ ಬೇಡಿಕೆ ಈಡೇರಿಸಬೇಕು ಅಂತ ಆಗ್ರಹಿಸಿದರು.
ಸರ್ಕಾರಕ್ಕೆ 250-350 ಕೋಟಿ ಆಗಬಹುದು. ಬಿಸಿಯೂಟದವರಿಗೂ ಜಾಸ್ತಿ ಮಾಡಿದರೆ 100 ಕೋಟಿ ಬರಬಹುದು ಹೊರೆ. ನೀವು ಪರ್ಸೆಂಟೇಜ್ ಫಿಕ್ಸ್ ಮಾಡಿಕೊಂಡು ತಿನ್ನುತ್ತಾ ಇದ್ದೀರ ಅಲ್ಲವಾ? ವರ್ಕ್ ಆರ್ಡರ್, ಬಿಲ್ ಮಾಡೋಕೆ ಇಷ್ಟು, ಬಿಲ್ ಆದ ಮೇಲೆ ಕೊಡೋಕೆ ಇಷ್ಟು ಅಂತ ಇವೆಲ್ಲಾ ಟೈಟ್ ಮಾಡಿದರೆ ಇವೆಲ್ಲದಕ್ಕೂ ದುಡ್ಡು ಕೊಡೋಕೆ ಆಗುವುದಿಲ್ಲವಾ? ಅಂತ ಕಿಡಿಕಾರಿದರು.
ಆಶಾ ಕಾರ್ಯಕರ್ತೆಯರು ಇಲ್ಲ ಅಂದರೂ ಕೆಲಸ ಮಾಡುತ್ತೇವೆ ಎಂಬ ಯು.ಟಿ. ಖಾದರ್ ಹೇಳಿಕೆ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಯು.ಟಿ. ಖಾದರ್ಗೆ ಹೇಳುತ್ತೇನೆ, ಇಷ್ಟು ವರ್ಷ ಯಾಕೆ ಅವರ ಕೈಯಲ್ಲಿ ಕೆಲಸ ಮಾಡಿಸಿದಿರಿ? 3 ವರ್ಷದಿಂದ ಯಾಕೆ ಕೆಲಸ ಮಾಡಿಸಿದರು? ತೆಗೆದು ಹಾಕಿ ಅವರನ್ನು. ಪ್ರಣಾಳಿಕೆಯಲ್ಲಿ 15 ಸಾವಿರ ಹೇಳಿದ್ದರು. ಇಂತಹ ಮಂತ್ರಿ, ಇಂತಹ ಸಿಎಂ ಹೇಗಿದೆ ಅಂದರೆ ತೆನಾಲಿ ರಾಮಕೃಷ್ಣ ಕಥೆ ಹೇಳಬೇಕು. ಈ ಸರ್ಕಾರ ಅನ್ಫಿಟ್ ಅಂತ ಕಿಡಿಕಾರಿದರು.ಇದನ್ನೂ ಓದಿ: ಮೀಸಲಾತಿ ರದ್ದು ಮಾಡಿದ್ರೆ ರಕ್ತಪಾತ ಆಗುತ್ತೆ ಅನ್ನೋದು ಬಿಜೆಪಿಗೆ ಗೊತ್ತು: ಸಿದ್ದರಾಮಯ್ಯ
ನಾಡಿನ ಜನತೆ ಅವರ ಸಮಸ್ಯೆ ಹೇಳಿಕೊಳ್ಳೋಕೆ ಬಂದಾಗ ಕೂರಿಸಿ ಮಾತನಾಡುವ ಸೌಜನ್ಯ ಇಲ್ಲ ಅಂದರೆ ಇದನ್ನು ಸರ್ಕಾರ ಅಂತ ಕರೆಯುತ್ತೀರಾ? ನಾನು ರಾಜಕೀಯ ಬೆರೆಸುವುದು ಬೇಡ ಅಂತ ನಾನು ಹೋಗಲಿಲ್ಲ. ಸಿಎಂದು ಹೂವಿನ ಹೃದಯ, ಜಪಾನ್ನಿಂದ ಬಂದ ಕೂಡಲೇ ಏನಾದರೂ ಮಾಡಬಹುದು ಅಂತ ನಿರೀಕ್ಷೆ ಇಟ್ಟಿದ್ದೆ ಅಂತ ಲೇವಡಿ ಮಾಡಿದರು.
ಅವರ ಹೇಳಿಕೆ ನೋಡಿದಾಗ ಬಹಳ ಬದಲಾವಣೆ ಆಗಿದ್ದಾರೆ. ಸಿಎಂಗೆ ಮನುಷ್ಯ ಕಷ್ಟ ಏನು ಅಂತ ಗೊತ್ತಿದೆ, ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಯಾಕಂದರೆ ಅವರ ವಂಶದಲ್ಲಿ ಕೃಷ್ಣದೇವರಾಯ ಕಾಲದಲ್ಲಿ ತೂಗಿದ ಹಾಗೆ ಚಿನ್ನ, ಬೆಳ್ಳಿ ತೂಗುತ್ತಿದ್ದರಂತೆ. ಅದು ಇವರ ತಲೆಗೆ ಹೋಗಿದ್ದರೆ ಇವರ ಬಗ್ಗೆ ಕನಿಕರ ಎಲ್ಲಿ ಬರುತ್ತದೆ? ಅವನ್ಯಾರೋ ಇನ್ನೊಬ್ಬ ಕಂಠೀಹಾರ ಕೊಡೋಕೆ ಆಗುತ್ತಾ? ಇಂತಹ ಹೇಳಿಕೆ ಇವರ ಪಕ್ಷವನ್ನು ಸಂಪೂರ್ಣವಾಗಿ ಸಮಾಧಿ ಮಾಡಿಕೊಳ್ಳೋಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಮಡಿಕೇರಿಯ ಓಂಕಾರೇಶ್ವರ ದೇವಾಲಯಕ್ಕೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಭೇಟಿ
