ಪಾಟ್ನಾ:ಬಿಹಾರದ (Bihar) ಮೊಕಾಮಾ ಕ್ಷೇತ್ರದ ಉಚ್ಚಾಟಿತ ಜೆಡಿಯು ಶಾಸಕ ಅನಂತ್ ಸಿಂಗ್(Anant Singh) ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ ವಿವಾಹ(Marriage) ಮಹೋತ್ಸವವು ಅದ್ಧೂರಿತನದಿಂದಾಗಿ ಈಗ ದೇಶದೆಲ್ಲೆಡೆ ಭಾರೀ ಸುದ್ದಿಯಲ್ಲಿದೆ.
ಮದುವೆ ಸಂಭ್ರಮದಲ್ಲಿ ನೋಟುಗಳ ಸುರಿಮಳೆಯಾಗಿದ್ದು, ನೆಲದ ಮೇಲೆ ಬಿದ್ದಿದ್ದ ರಾಶಿ ರಾಶಿ ನೋಟುಗಳನ್ನು ಜನರು ಪೊರಕೆಯಲ್ಲಿ ಗುಡಿಸಿ ಒಟ್ಟುಗೂಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪಾಟ್ನಾ ಜಿಲ್ಲೆಯ ನದವಾನ್ ಗ್ರಾಮದಲ್ಲಿರುವ ಶಾಸಕರ ಪೂರ್ವಿಕರ ಮನೆಯಲ್ಲಿ ಬುಧವಾರ ಶಿವಾಂಗಿ ಮತ್ತು ರಿಷಿಕೇಶ್ ಕುಮಾರ್ ಅವರ ವಿವಾಹ ನೆರವೇರಿತು. ಈ ಅದ್ಧೂರಿ ಸಮಾರಂಭಕ್ಕೆ ಅತಿಥಿಗಳು ಹಾಗೂ ಕುತೂಹಲಿಗರ ದಂಡೇ ಹರಿದುಬಂದಿತ್ತು. ವಧು ಹಾಗೂ ಕುಟುಂಬಸ್ಥರಿಗೆ ದುಬಾರಿ ಉಡುಗೊರೆಗಳ ಮಹಾಪೂರವೇ ಹರಿದುಬಂದಿದ್ದು, ಮದುವೆ ಸಂಭ್ರಮದಲ್ಲಿ ಗಾಳಿಯಲ್ಲಿ ನೋಟುಗಳನ್ನು ತೂರಲಾಯಿತು. ಇದನ್ನೂ ಓದಿ: ಬಿಹಾರ ಶಾಸಕನ ಪುತ್ರಿಯ ಅದ್ಧೂರಿ ವಿವಾಹಕ್ಕೆ ಜನಸಾಗರ: 10 ಕಿ.ಮೀ. ಟ್ರಾಫಿಕ್ ಜಾಮ್!
At the wedding of Mokama MLA Anant Singh’s daughter, Shivangi Singh, people were seen sweeping up scattered currency notes from the ground.
🔗 https://t.co/uNFgnwDTLk https://t.co/hFL5lywsz6
— The Indian Express (@IndianExpress) November 26, 2026
ವಿಡಿಯೋ ವೈರಲ್ ಆಗುತ್ತಿದ್ದಂತೆ ಇವು ಅಸಲಿ ನೋಟುಗಳೋ ಅಥವಾ ನಕಲಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
‘ಛೋಟೆ ಸರ್ಕಾರ್’ ಎಂದೇ ಖ್ಯಾತರಾಗಿರುವ ಶಾಸಕ ಅನಂತ್ ಸಿಂಗ್, ಎಸ್ಯುವಿ ಕಾರಿನ ಸನ್ರೂಫ್ ಮೂಲಕ ಎದ್ದು ನಿಂತು ಕೇಸರಿ ಶಾಲು (ಗಮ್ಚಾ) ಬೀಸುತ್ತಾ ಮದುವೆ ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟರು. ಈ ವೇಳೆ ಅವರನ್ನು ನೋಡಲು ಬೆಂಬಲಿಗರು ಮುಗಿಬಿದ್ದಿದ್ದು, ಯಾವುದೋ ರಾಜಕೀಯ ರೋಡ್ ಶೋ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇದನ್ನೂ ಓದಿ: 100 ಕೋಟಿ ಒಡೆಯ ‘ಛೋಟೆ ಸರ್ಕಾರ್’ ಮಗಳಿಗೆ ಅಮೆರಿಕದ ವರ – ಬಿಹಾರ ಶಾಸಕನ ಪುತ್ರಿ ಓದಿದ್ದೇನು?
ಆಮಂತ್ರಣ ಬೇಡ
ಈ ಮದುವೆಗೆ ಬರಲು ಯಾವುದೇ ವಿಶೇಷ ಆಮಂತ್ರಣ ಪತ್ರಿಕೆಯ ಅಗತ್ಯವಿಲ್ಲ ಎಂದು ಅನಂತ್ ಸಿಂಗ್ ಮೊದಲೇ ಘೋಷಿಸಿದ್ದರು. “ಇದೇನು ಸಿನಿಮಾ ಥಿಯೇಟರ್ ಅಲ್ಲ, ಟಿಕೆಟ್ ತಗೊಂಡು ಬರೋಕೆ. ಯಾರು ಬೇಕಾದರೂ ಬರಬಹುದು” ಎನ್ನುವ ಮೂಲಕ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದರು. ಅದರಂತೆ ಬಂದಿದ್ದ ಲಕ್ಷಾಂತರ ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಂಪ್ರದಾಯಿಕ ಬಿಹಾರಿ ಖಾದ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳ ಸುಮಾರು 150ಕ್ಕೂ ಹೆಚ್ಚು ಬಗೆಯ ರುಚಿಕರ ಅಡುಗೆಗಳನ್ನು ಸಿದ್ಧಪಡಿಸಲಾಗಿತ್ತು.
