ಇಸ್ಲಾಮಾಬಾದ್: ಇಬ್ಬರು ವಿದೇಶಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಲ್ಲಿ ಪಾಕಿಸ್ತಾನದ (Pakistan) ಉಪಪ್ರಧಾನಿ ಸಂಬಂಧಿ ಬಂಧನಕ್ಕೊಳಗಾಗಿದ್ದಾನೆ.
ಅತ್ಯಾಚಾರ ಕೇಸಲ್ಲಿ ಮುಹಮ್ಮದ್ ರಜಾ ದಾರ್, ಹಸನ್ ರಜಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಬಂಧಿತರು. ಆರೋಪಿಗಳನ್ನು ಲಾಹೋರ್ ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದನ್ನೂ ಓದಿ: 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿ ಐತಿಹಾಸಿಕ ಭೇಟಿ – ಮುಂದಿನ ವಾರ ನ್ಯೂಜಿಲೆಂಡ್‌ಗೆ ಮೋದಿ ಪ್ರವಾಸ
ಪ್ರಮುಖ ಶಂಕಿತ ಎಂದು ಗುರುತಿಸಲ್ಪಟ್ಟ ರಜಾ ದಾರ್, ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಸಂಬಂಧಿ ಎನ್ನಲಾಗಿದೆ. ‘ಉಪ ಪ್ರಧಾನಿ ಇಶಾಕ್ ದಾರ್ ಅವರ ಆಪ್ತ ಸಂಬಂಧಿಯೊಬ್ಬರು ಈ ಪ್ರಮುಖ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಇದು ಬಹಳ ಸೂಕ್ಷ್ಮ ವಿಷಯವಾಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 29 ರಂದು ಲಾಹೋರ್‌ನಲ್ಲಿ ಐವರು ಪುರುಷರು ನೆದರ್‌ಲ್ಯಾಂಡ್ಸ್ ಮತ್ತು ಇನ್ನೊಬ್ಬರು ವೆನೆಜುವೆಲಾದ ವಿದೇಶಿ ಪ್ರಜೆಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯೊಬ್ಬರ ತಂದೆ ಸ್ಪೇನ್‌ನಿಂದ ಕರೆ ಮಾಡಿದ ನಂತರ ಪೊಲೀಸರು ಮಹಿಳೆಯರನ್ನು ರಕ್ಷಿಸಿದ್ದಾರೆ. ಗುರುವಾರ ಲಾಹೋರ್ ಪೊಲೀಸರು ಐವರು ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 365A (ಅಪಹರಣ) ಮತ್ತು 375A (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.
ಐದನೇ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ಆರೋಪಿ ರಾಜಾ ದಾರ್, ಮಹಿಳೆಯರನ್ನು ಭೇಟಿಯಾಗಿದ್ದ. ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದ ಎಂದು ಸಂತ್ರಸ್ತ ಮಹಿಳೆಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಮಹಿಳೆಯರು ಮತ್ತು ರಜಾ ದಾರ್ ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಪಾಲುದಾರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಗೆ ಮಗ ಮೊಜ್ತಬಾ ಹೋಗಲ್ಲ – ಭಾರತದಿಂದ ಭಾಗವಹಿಸೋದ್ಯಾರು?
ಪಾಕಿಸ್ತಾನ ಭೇಟಿಗಾಗಿ ರಾಜಾ ದಾರ್ ಬುಸಿನೆಸ್ ವೀಸಾಗಳನ್ನು ವ್ಯವಸ್ಥೆ ಮಾಡಿದ್ದ. ಮಹಿಳೆಯರು ಜೂನ್ 29 ರಂದು ಲಾಹೋರ್‌ಗೆ ಬಂದಿದ್ದರು. ‘ಲಾಹೋರ್‌ಗೆ ಬಂದಿಳಿದ ನಂತರ, ರಜಾ ದಾರ್ ಮತ್ತು ಇತರ ಶಂಕಿತರು ತಮ್ಮನ್ನು ಅಪಹರಿಸಿ ಒಂದು ಮನೆಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
