ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಂಸತ್ತಿನ ಉಭಯ ಸದನಗಳ(Parliament Session) ಕಲಾಪಕ್ಕೆ ಕೇಂದ್ರ ಸರ್ಕಾರ ಮುಹೂರ್ತ ನಿಗದಿಪಡಿಸಿದೆ. ಪ್ರಮುಖ ಸರ್ಕಾರಿ ಕಲಾಪಗಳನ್ನು ನಡೆಸುವ ಸಲುವಾಗಿ ನವೆಂಬರ್ 30ರ (ಸೋಮವಾರ) ಬೆಳಿಗ್ಗೆ ಲೋಕಸಭೆ ಹಾಗೂ ಡಿಸೆಂಬರ್ 2ರ (ಬುಧವಾರ) ಬೆಳಿಗ್ಗೆ ರಾಜ್ಯಸಭೆ ಮತ್ತೆ ಸಮಾವೇಶಗೊಳ್ಳಲಿವೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಅವರು ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಕಲಾಪಗಳ ಅಗತ್ಯತೆಗೆ ಅನುಗುಣವಾಗಿ ಡಿಸೆಂಬರ್ 3ರಂದು ಉಭಯ ಸದನಗಳ ಕಲಾಪ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಈ ದಿಢೀರ್ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರದ ದೊಡ್ಡ ಕಾರ್ಯಸೂಚಿ ಅಡಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಮುಖ್ಯವಾಗಿ ಕ್ಷೇತ್ರ ಪುನರ್ವಿಂಗಡಣೆ (Delimitation) ಹಾಗೂ ಮಹಿಳಾ ಮೀಸಲಾತಿ (Women’s Reservation) ಜಾರಿಗೆ ಸಂಬಂಧಿಸಿದ ಮಹತ್ವದ ಮಸೂದೆಗಳನ್ನು ಸರ್ಕಾರ ಮಂಡಿಸಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ. ಆದರೆ ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ಯಾವೆಲ್ಲಾ ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
The Government has requested Hon’ble Speaker, Lok Sabha and Hon’ble Chairman, Rajya Sabha to reconvene Lok Sabha on Monday, 30th November, 2026 and Rajya Sabha on Wednesday, 2nd December, 2026 respectively to transact essential Government Business. Subject to exigencies of the Business, the sitting of both Houses may conclude on 3rd December, 2026.
— Kiren Rijiju (@KirenRijiju) November 26, 2026
ಈ ಬಾರಿಯ ಸಂಸತ್ ಅಧಿವೇಶನವು ಸಂವಿಧಾನಾತ್ಮಕವಾಗಿ ವಿಶೇಷ ದಾಖಲೆಯೊಂದನ್ನು ಬರೆದಿದೆ. ಕಳೆದ ಆಗಸ್ಟ್ 13 ರಂದು ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.ಸಾಸಾಮಾನ್ಯವಾಗಿ ಸದನ ಮುಂದೂಡಿದ ಕೆಲವೇ ದಿನಗಳಲ್ಲಿ ರಾಷ್ಟ್ರಪತಿಗಳು ಅಧಿವೇಶನವನ್ನು ಮುಕ್ತಾಯಗೊಳಿಸಿ ಆದೇಶ ಹೊರಡಿಸುತ್ತಾರೆ. ಆದರೆ ಆಗಸ್ಟ್ 13ರ ನಂತರ ಇದುವರೆಗೂ ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿಲ್ಲ. ಹೀಗಾಗಿ ಒಂದೇ ಅಧಿವೇಶನದ ಎರಡು ಹಂತಗಳ ನಡುವೆ 100 ದಿನಗಳಿಗೂ ಹೆಚ್ಚು ಕಾಲ ಅಂತರವಿರುವುದು ಭಾರತದ ಸಂಸದೀಯ ಇತಿಹಾಸದಲ್ಲೇ ಇದೇ ಮೊದಲು ಎಂಬ ಐತಿಹಾಸಿಕ ದಾಖಲೆಗೆ ಇದು ಪಾತ್ರವಾಗಿದೆ. ಇದೇ ಕಾರಣಕ್ಕೆ ಹೊಸದಾಗಿ ಅಧಿವೇಶನ ಕರೆಯುವ ಬದಲು, ಹಳೆಯ ಅಧಿವೇಶನವನ್ನೇ ಪುನರಾರಂಭ ಮಾಡಲಾಗುತ್ತಿದೆ.
ಅಲ್ಪಾವಧಿಯ ಈ ಕಲಾಪದಲ್ಲಿ ಯಾವೆಲ್ಲಾ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂಬುದರ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಕಲಾಪ ಆರಂಭಕ್ಕೂ ಮುನ್ನ ಸರ್ವಪಕ್ಷ ಸಭೆ ನಡೆಸಿ, ಮಂಡನೆಯಾಗಲಿರುವ ಮಸೂದೆಗಳ ಬಗ್ಗೆ ಸರ್ಕಾರ ವಿಪಕ್ಷಗಳಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.
