ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಅವರು ಭದ್ರತಾ ಕಾರಣಗಳಿಂದಾಗಿ ತಮ್ಮ ತಂದೆ, ಇರಾನ್‌ನ ಮಾಜಿ ನಾಯಕ ಅಲಿ ಖಮೇನಿ (Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದಲ್ಲಿನ ಇರಾನ್ ಪ್ರತಿನಿಧಿ ತಿಳಿಸಿದ್ದಾರೆ.
ಇಸ್ರೇಲ್ ಜೊತೆಗಿನ ಉದ್ವಿಗ್ನತೆ ಹೆಚ್ಚಿದೆ. ಮೊಜ್ತಬಾ ಅವರ ಸಾರ್ವಜನಿಕ ಹಾಜರಾತಿ ಅಪಾಯಕಾರಿಯನ್ನಾಗಿ ಮಾಡಬಹುದು. ಇಸ್ರೇಲಿ ಬೆದರಿಕೆಗಳ ಕಾರಣ ಭದ್ರತಾ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಇರಾನ್ ಪ್ರತಿನಿಧಿ ಅಯತೊಲ್ಲಾ ಹಕೀಮ್ ಇಲಾಹಿ ಹೇಳಿದ್ದಾರೆ. ಇದನ್ನೂ ಓದಿ: ನಾವು ಪಾಕಿಸ್ತಾನದ ಭಾಗವಲ್ಲ, ಭಾರತದ ನೆರವು ಕೋರುತ್ತೇವೆ – ಮುನೀರ್ ವಿರುದ್ಧ PoK ಜನರ ಆಕ್ರೋಶ
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಿಂದ, 36 ವರ್ಷಗಳ ಕಾಲ ಇರಾನ್ ಅನ್ನು ಆಳಿದ ಅಲಿ ಖಮೇನಿ ಫೆಬ್ರವರಿ 28 ರಂದು ಹತ್ಯೆಗೀಡಾದರು. ಮಾಜಿ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆ ಪ್ರಕ್ರಿಯೆ ಜುಲೈ 4 ರಂದು ಟೆಹ್ರಾನ್‌ನಲ್ಲಿ ಪ್ರಾರಂಭವಾಗಲಿದೆ. ಜುಲೈ 9 ರಂದು ತವರು ಈಶಾನ್ಯ ಪವಿತ್ರ ನಗರವಾದ ಮಶಾದ್‌ನಲ್ಲಿ ಖಮೇನಿ ಅಂತ್ಯಕ್ರಿಯೆ ನೆರವೇರಲಿದೆ.

ಜುಲೈ 7 ರಂದು ಟೆಹ್ರಾನ್‌ನ ದಕ್ಷಿಣಕ್ಕೆ ಇರುವ ಪವಿತ್ರ ನಗರವಾದ ಕೋಮ್‌ನಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ಮತ್ತು ಇತರ ಧಾರ್ಮಿಕ ಆಚರಣೆಗಳು ನಡೆಯಲಿವೆ. ಆರು ದಿನಗಳ ಅವಧಿಯಲ್ಲಿ ಲಕ್ಷಾಂತರ ಶೋಕತಪ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಭಾರತದಿಂದ ಯಾರು ಭಾಗಿ?
ಬಿಹಾರ ಗವರ್ನರ್ ಜನರಲ್ ಸೈಯದ್ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪವಿತ್ರಾ ಮಾರ್ಗರಿಟಾ ಅವರು ಇರಾನ್‌ನಲ್ಲಿ ನಡೆಯಲಿರುವ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರತೀಯ ನಿಯೋಗದ ಭಾಗವಾಗಲಿದ್ದಾರೆ. ಹೆಚ್ಚುವರಿಯಾಗಿ, ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಅಂತ್ಯಕ್ರಿಯೆ ಸಮಾರಂಭಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತ-ಸೀಶೆಲ್ಸ್ ಬಾಂಧವ್ಯಕ್ಕೆ ಚಟ್ನಿ, ಸಮೋಸಾ ಸಾಕ್ಷಿ ಎಂದ ಪ್ರಧಾನಿ ಮೋದಿ
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶಿಯಾ ಧರ್ಮಗುರುವಿನ ಸರ್ಕಾರಿ ಅಂತ್ಯಕ್ರಿಯೆ ಮತ್ತು ಅಂತ್ಯಕ್ರಿಯೆ ಸಮಾರಂಭಗಳಿಗೆ ಆಹ್ವಾನಿಸಿದ್ದರು. ಆದಾಗ್ಯೂ, ಪ್ರಧಾನಿ ಮೋದಿ ನಿಯೋಗದ ಭಾಗವಾಗುವ ಸಾಧ್ಯತೆ ಕಡಿಮೆಯಿದೆ.
ಮುಂದುವರಿದ ಸಂಘರ್ಷ
ಇರಾನ್ ಮತ್ತು ಅಮೆರಿಕ ಕಳೆದ ತಿಂಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಆದರೆ, ಮಧ್ಯಪ್ರಾಚ್ಯದಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು, ಕದನ ವಿರಾಮವನ್ನು ದುರ್ಬಲ ಸ್ಥಿತಿಗೆ ತಂದಿದೆ. ಇರಾನ್ ಒಂದು ವಾಣಿಜ್ಯ ಹಡಗನ್ನು ಟಾರ್ಗೆಟ್ ಮಾಡಿ ಹೊಡೆದಿದೆ. ಅದು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ ಅನುಮೋದಿತ ಮಾರ್ಗದಿಂದ ದಾರಿ ತಪ್ಪಿತು. ʼ10 ಇರಾನಿನ ಮಿಲಿಟರಿ ಗುರಿಗಳನ್ನು ಹೊಡೆದುರುಳಿಸಲಾಗಿದೆʼ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಪ್ರತಿಕ್ರಿಯಿಸಿತು. ಇರಾನ್ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಯುಎಸ್ ನೆಲೆಗಳ ಮೇಲೆ ದಾಳಿ ಮಾಡಿತು.
