ಹರಾರೆ: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ(Vaibhav Suryavanshi) ಅವರ ಸ್ಫೋಟಕ ಅರ್ಧಶತಕ ಮತ್ತು ಮಯಾಂಕ್ ಯಾದವ್ ಅವರ ಉತ್ತಮ ಬೌಲಿಂಗ್ ನೆರವಿನಿಂದ ಭಾರತ(India) ಜಿಂಬಾಬ್ವೆ(Zimbabwe) ವಿರುದ್ಧದ ಮೂರನೇ ಟಿ20 ಪಂದ್ಯವನ್ನು 35 ರನ್‌ಗಳಿಂದ ಜಯಗಳಿಸಿ ಸರಣಿಯನ್ನು ಕ್ವೀನ್ ಸ್ವೀಪ್ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ 7 ವಿಕೆಟ್ ನಷ್ಟಕ್ಕೆ 157 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
ಜಿಂಬಾಬ್ವೆ ಮೊದಲ ಓವರಿನ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡಿತ್ತು. 65 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳುವಾಗಲೇ ಸೋಲಿನತ್ತ ವಾಲಿತ್ತು. ರಯಾನ್ ಬರ್ಲ್ 54 ರನ್(43 ಎಸೆತ, 5 ಬೌಂಡರಿ) ವೆಸ್ಲಿ ಮಧೆವೆರೆ 28 ರನ್(25 ಎಸೆತ, 1 ಬೌಂಡರಿ, 2 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಮಯಾಂಕ್ ಯಾದವ್ 3 ವಿಕೆಟ್ ಕಿತ್ತರೆ, ಯಶ್ ಥಾಕೂರ್ 2, ಅಶೋಕ್ ಶರ್ಮಾ ಮತ್ತು ರವಿ ವಿಶ್ನೋಯಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ 20 ರನ್ ಗಳಿಸುವಷ್ಟರಲ್ಲೇ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತ್ತು. ಇಶನ್ ಕಿಶನ್ 29 ರನ್ ಗಲಿಸಿ ಔಟಾದರೆ ವೈಭವ್ ಸೂರ್ಯವಂಶಿ ಸ್ಫೋಟಕ 81 ರನ್(49 ಎಸೆತ,8 ಬೌಂಡರಿ, 4 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ 27 ರನ್ ಗಳಿಸಿದರೆ ಕೊನೆಯಲ್ಲಿ ರಿಂಕು ಸಿಂಗ್ 14 ಎಸೆತಗಳಲ್ಲಿ 25 ರನ್(2 ಬೌಂಡರಿ, 1 ಸಿಕ್ಸ್) ಹೊಡೆದ ಪರಿಣಾಮ ತಂಡದ ಮೊತ್ತ 190 ರನ್‌ಗಳ ಗಡಿ ದಾಟಿತ್ತು.
