– ಪುನೀತ್‌ಗೆ ಪ್ರಭಾವಿ ಮಹಿಳೆಯಿಂದ ಕರೆ
– ಎಫ್‌ಎಸ್‌ಎಲ್ ವರದಿಯಲ್ಲಿದೆ ಸ್ಫೋಟಕ ವಿಚಾರ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಸ್ಫೋಟಕ ಸತ್ಯಗಳು ಬೆಳಕಿಗೆ ಬಂದಿವೆ.

ಪ್ರಕರಣದ 49ನೇ ಸಾಕ್ಷಿ ಸಂದೀಪ್‌ಗೆ(Sandeep) ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಿದ ಕೃತ್ಯದ ಹಿಂದೆ ಪ್ರಭಾವಿ ಮಹಿಳೆಯೊಬ್ಬರ ಹಸ್ತವಿರುವುದು ಮತ್ತು ಮಾಸ್ಟರ್ ಪ್ಲಾನ್ ನಡೆದಿರುವುದು ತಾಂತ್ರಿಕ ತನಿಖೆಯಲ್ಲಿ ಸಾಬೀತಾಗಿದೆ.
ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಹಾಗೂ ನಟ ದರ್ಶನ್(Darshan) ಕುಟುಂಬಕ್ಕೆ ಅತ್ಯಾಪ್ತನಾಗಿದ್ದ ಪುನೀತ್ ಎಂಬಾತನ ಮೂಲಕ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿಸಲಾಗಿತ್ತು. ಅಪಹರಣ ಮತ್ತು ಬೆದರಿಕೆ ಕೃತ್ಯ ನಡೆಯುತ್ತಿದ್ದ ಸಮಯದಲ್ಲಿ ಪುನೀತ್, ಕಿರಣ್ ಹಾಗೂ ಗೌರವ್ ಶೆಟ್ಟಿ ಮೂವರೂ ವಾಟ್ಸಪ್ ಕಾನ್ಫರೆನ್ಸ್ ಕಾಲ್‌ನಲ್ಲಿದ್ದರು. ಕಾಲ್‌ನಲ್ಲಿದ್ದುಕೊಂಡೇ ಕಿರಣ್ ಮತ್ತು ಗೌರವ್ ಶೆಟ್ಟಿ, ಸಾಕ್ಷಿಯನ್ನು ಹೇಗೆ ಹೆದರಿಸಬೇಕು ಎಂಬುದರ ಕುರಿತು ಪುನೀತ್ ಆಂಡ್ ಟೀಮ್‌ಗೆ ಹಂತ ಹಂತವಾಗಿ ಮಾರ್ಗದರ್ಶನ (Guide) ನೀಡುತ್ತಿದ್ದರು.
ಎಫ್‌ಎಸ್‌ಎಲ್ ವರದಿಯ ಪ್ರಕಾರ, ಈ ಕೃತ್ಯ ನಡೆಯುವ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರಿಂದ ಕರೆ ಬಂದಿತ್ತು. ಗೌರವ್ ಶೆಟ್ಟಿ ಏನು ಹೇಳುತ್ತಾನೋ ಅದನ್ನು ಚಾಚೂ ತಪ್ಪದೇ ಮಾಡು ಎಂದು ಆ ಪ್ರಭಾವಿ ಮಹಿಳೆ ಪುನೀತ್‌ಗೆ ಸೂಚನೆ ನೀಡಿದ್ದಳು ಎಂಬುದು ವರದಿಯಿಂದ ದೃಢಪಟ್ಟಿದೆ.
ಸಾಕ್ಷಿಗೆ ಬೆದರಿಕೆ ಹಾಕಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ನೇರ ಕೈವಾಡವಿರುವ ಗೌರವ್ ಶೆಟ್ಟಿ ಹಾಗೂ ಕಿರಣ್‌ಗೆ ಸದ್ಯದಲ್ಲೇ ಸಮನ್ಸ್ ನೀಡಿ ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ಪ್ರಮುಖ ತಾಂತ್ರಿಕ ವರದಿ (Technical Report) ಬರಬೇಕಿದ್ದು, ಅದು ಕೈಸೇರಿದ ತಕ್ಷಣವೇ ಈ ‘ಪ್ರಭಾವಿ ಮಹಿಳೆ’ ಯಾರು ಎಂಬುದು ಸೇರಿದಂತೆ ಮತ್ತಷ್ಟು ಸ್ಫೋಟಕ ವಿಚಾರಗಳು ಅಧಿಕೃತವಾಗಿ ಹೊರಬೀಳಲಿವೆ.
ಯಾರಿದು ಸಂದೀಪ್?
ತುಮಕೂರಿನ ರಂಗಾಪುರ ನಿವಾಸಿ ಸಂದೀಪ್ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್ ಆಗಿದ್ದಾರೆ. ರೇಣುಕಾಸ್ವಾಮಿ ಹಾಗೂ ಆತನನ್ನು ಅಪಹರಿಸಿದ್ದ ಆರೋಪಿಗಳು ಇದೇ ಬಾರ್‌ನಲ್ಲಿ ಊಟ ಮಾಡಿದ್ದರಿಂದ, ಸಂದೀಪ್ ಈ ಕೇಸ್‌ನ ಪ್ರಮುಖ ಕಣ್ಣಾರೆ ಕಂಡ ಸಾಕ್ಷಿಯಾಗಿದ್ದಾರೆ.
ಜುಲೈ ಮೊದಲ ವಾರ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಮಯದಲ್ಲಿ ಸಂದೀಪ್ ನನಗೆ ಪರಿಚಯವಿರುವ ವ್ಯಕ್ತಿ ಮೂಲಕ ಕೆಲ ವ್ಯಕ್ತಿಗಳು ನನ್ನನ್ನು ಮಾತನಾಡಿಸಿದ್ದಾರೆ. ತಾವು ಹೇಳಿದಂತೆ ಸಾಕ್ಷ್ಯ ನುಡಿಯಬೇಕು ಎಂಬುದಾಗಿ ನನಗೆ ಸೂಚಿಸಿದರು ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ನನಗೆ ಅಪರಿಚಿತರಿಂದ ಒತ್ತಡದ ಕರೆ ಬಂದಿದ್ದು, ನ್ಯಾಯಾಲಯದಲ್ಲಿ ಹೇಳಿಕೆಯನ್ನು ತಿರುಚಿ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕವನ್ನು ಸೆಷನ್ಸ್ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಬೆದರಿಕೆ ಬಂದ ಬೆನ್ನಲ್ಲೇ ಪೊಲೀಸರು ಕರೆ ವಿವರವನ್ನು ಪತ್ತೆ ಹಚ್ಚಲು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು.
