– ತಿಂಗಳಿಗೆ 1 ಕೋಟಿ ಮಾನವದಿನ ಉದ್ಯೋಗ ಸೃಷ್ಟಿ
– ರೈತರು ಬೆಳೆಗೆ ವಿಮೆ ಮಾಡಿಸುವಂತೆ ಸಲಹೆ
ಬೆಂಗಳೂರು: ರಾಜ್ಯದ 178 ತಾಲೂಕುಗಳಲ್ಲಿ ಮಳೆಯ ಕೊರತೆ ಆಗಿದ್ದು, 60 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಆಗಿದೆ. ಹೀಗಾಗಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲು ಮತ್ತು ಯಾರೂ ಗುಳೆ ಹೋಗದಂತೆ ಗ್ರಾಮಗಳಲ್ಲೇ ಉದ್ಯೋಗ ನೀಡಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ ಖಂಡ್ರೆ (Eshwar Khandre) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಕೊರತೆ (Drinking Water Shortage) ಆಗಬಾರದು ಎಂದು 117 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದ್ದೇವೆ. 95 ಕೋಟಿ ರೂ. ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇನ್ನೂ 25 ಕೋಟಿ ರೂ. ವಿವಿಧ ಜಿಲ್ಲೆಗಳಲ್ಲಿ ಇದೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಗ್ರಾಮದಲ್ಲಿ, ತಾಂಡಾದಲ್ಲಿ ನೀರು ಪೂರೈಸುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ, ಖಾಸಗಿ ಬೋರ್‌ವೆಲ್, ಬಾವಿ ಬಾಡಿಗೆಗೆ ಪಡೆದು ಟ್ಯಾಂಕರ್ (Water Tanker) ಮೂಲಕ ನೀರು ಪೂರೈಸಲು ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಸಲಾಗಿದೆ ಎಂದು ತಿಳಿಸಿದರು.
ಇನ್ನೂ 3-4 ತಿಂಗಳು ಮಳೆಯೇ ಬಾರದಿದ್ದರೆ ಮುಂದಿನ ವರ್ಷ ಮುಂಗಾರು ಆರಂಭವಾಗುವವರೆಗೆ ನೀರಿನ ಕೊರತೆ ಆಗದಂತೆ ಏನೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಕ್ರಮಗಳನ್ನು ಕೈಗೊಳ್ಳಲಾಗುವುದು, ಇದಕ್ಕೂ ಅಧ್ಯಯನ, ಸಿದ್ಧತೆ ನಡೆದಿದೆ. ಬ್ಯಾಂಕ್ ಸಾಲ ಬಾಕಿ ಇರುವ ರೈತರು ಮತ್ತು ಸಾಲವನ್ನ ಒಂದು ಬಾರಿ ಇತ್ಯರ್ಥ ಮಾಡಿಕೊಂಡಿರುವ ರೈತರು ಸಮುದಾಯ ಸೇವಾ ಕೇಂದ್ರದಲ್ಲಿ ಬೆಳೆ ವಿಮೆ ಕಂತು ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ತಾವು ಬಿತ್ತನೆ ಮಾಡಿರುವ ಬೆಳೆಗೆ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ವಿಬಿ-ಜಿ ರಾಮ್ ಜಿ ಅಡಿ 5 ಲಕ್ಷ ಮಾನವದಿನ ಉದ್ಯೋಗ ಸೃಷ್ಟಿ:
ಕೇಂದ್ರ ಸರ್ಕಾರ ನರೇಗಾದಡಿ ನೀಡುತ್ತಿದ್ದ 90:10 ಅನುಪಾತ ಬದಲಿಸಿ 60:40 ಅನುಪಾತ ಮಾಡಿದ್ದು, ರಾಜ್ಯದ ಮೇಲೆ ಹೊರೆಯಾಗಿದ್ದರೂ ಕೂಡ ಬಡವರ, ಗ್ರಾಮೀಣರ, ದಲಿತರ, ವಂಚಿತರ ಹಿತದೃಷ್ಟಿಯಿಂದ ಜುಲೈ 1 ರಿಂದ ಯೋಜನೆ ಜಾರಿಗೆ ತಂದಿದ್ದು, ನಿನ್ನೆಯವರೆಗೆ 5 ಲಕ್ಷ ಮಾನವದಿನ ಉದ್ಯೋಗ ಸೃಷ್ಟಿಸಲಾಗಿದೆ. ರಾಜ್ಯದ ಗ್ರಾಮ ಪಂಚಾಯತಿಗೆ ಉದ್ಯೋಗ ಕೇಳಿ ಬಂದವರಿಗೆಲ್ಲಾ ಉದ್ಯೋಗ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಬಿ ಜಿ ರಾಮ್ ಜಿ ಅಡಿ 318 ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶವಿದ್ದು, ಹೊಸದಾಗಿ ಹೆಚ್ಚುವರಿ ಕ್ರಿಯಾಯೋಜನೆ ಸಲ್ಲಿಸಲು ಪೋರ್ಟಲ್ ನಲ್ಲಿ ಅವಕಾಶವಿದೆ. ಜೊತೆಗೆ ಶಾಲಾ ಕೊಠಡಿ, ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳ ದುರಸ್ತಿ, ನಿರ್ವಹಣೆ, ಕೃಷಿ ಹೊಂಡ, ವಿತರಣಾ ಕಾಲುವೆ, ಹನಿ ನೀರಾವರಿ, ಕಿರು ಅರಣ್ಯದಂತಹ ಯೋಜನೆಗಳನ್ನೂ ಕೈಗೊಳ್ಳಲು ಅವಕಾಶವಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಸಚಿವರು ಮನವಿ ಮಾಡಿದರು.
ತ್ರೈಮಾಸಿಕದಲ್ಲಿ 2,900 ಕೋಟಿ ರೂ. ಬಿಡುಗಡೆ
ಈ ತಿಂಗಳಾಂತ್ಯದೊಳಗೆ ವಿಬಿ ಜಿ ರಾಮ್ ಜಿ ಅಡಿ 10 ಲಕ್ಷ ಮಾನವ ದಿನ ಸೃಜಿಸಲಾಗುವುದು. ಆದ್ರೆ ಪ್ರತಿ ತಿಂಗಳೂ 1.25 ಕೋಟಿ ಮಾನವ ದಿನ ಉದ್ಯೋಗ ಸೃಷ್ಟಿ ಗುರಿಯಿದ್ದು, ಮೊದಲ ತ್ರೈಮಾಸಿಕದಲ್ಲಿ 2,900 ಕೋಟಿ ರೂ. ಬಿಡುಗಡೆ ಆಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಸಮಸ್ಯೆ ಬರುವುದಿಲ್ಲ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರುವ ಪ್ರತಿಯೊಬ್ಬರಿಗೂ 125 ದಿನ ಉದ್ಯೋಗ ದೊರಕಲಿದೆ. ರೈತರ ಆತ್ಮಹತ್ಯೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ಈ ದೇಶದ ಬೆನ್ನೆಲುಬು, ಅವರು ಅನ್ನದಾತರು, ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು, ಆತ್ಮಹತ್ಯೆಯೇ ಪರಿಹಾರವಲ್ಲ, ಯಾರೂ ಆ ತಪ್ಪ ಮಾಡಬಾರದು ಸರ್ಕಾರ ಅನ್ನದಾತರ ರಕ್ಷಣೆಗೆ ಸದಾ ನಿಲ್ಲುತ್ತದೆ ಎಂದು ಹೇಳಿದರು.
