ಬೆಂಗಳೂರು: ಹುಡುಗಿ ಆಸೆ ತೋರಿಸಿ ವ್ಯಕ್ತಿಯನ್ನು ಸುಲಿಗೆ ಮಾಡಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚೇತನ್ ಮನು, ಶಾಬು , ಮಂಜುನಾಥ, ಜಯಕುಮಾರ್, ಅರುಣ ಕೀರ್ತಿ, ಕಾಂತ ರಾಜು, ಸಂದೀಪ್ ಬಂಧಿತ ಆರೋಪಿಗಳು. ಇವರು ಆ್ಯಪ್ ಒಂದರಲ್ಲಿ ಹುಡುಗಿಯರು ಇದ್ದಾರೆ ಎಂದು ಮೊದಲು ಪೋಸ್ಟ್ ಮಾಡಿದ್ದರು. ಇದನ್ನು ನಂಬಿ ಹುಡುಗಿಯನ್ನು ಭೇಟಿಯಾಗಲು ಹೋಗಿದ್ದ ವ್ಯಕ್ತಿಯನ್ನು ಆರೋಪಿಗಳು ಸುಲಿಗೆ ಮಾಡಿದ್ದರು.
ಆರೋಪಿಗಳ ಜೊತೆ ಹುಡುಗಿಯರನ್ನು ಭೇಟಿಯಾಗಲು ಕೆಜಿ ಹಳ್ಳಿಯ ಹೆಚ್‌ಆರ್‌ಬಿಆರ್ ಲೇಔಟ್ ಬಳಿ ಸಂತ್ರಸ್ತ ವ್ಯಕ್ತಿ ತೆರಳಿದ್ದ. ಈ ವೇಳೆ ಆಟೋದಲ್ಲಿ ಯುವತಿಯರು ಕುಳಿತಿದ್ದರು. ಅವರನ್ನು ಭೇಟಿಯಾಗುವ ಮುನ್ನವೇ ಆರೋಪಿಗಳು ವ್ಯಕ್ತಿಯನ್ನು ಅಪಹರಿಸಿದ್ದರು.
ಬಳಿಕ ಆಟೋದಲ್ಲಿ ನಗರದ ವಿವಿಧ ಭಾಗದಲ್ಲಿ ಸುತ್ತಾಡಿಸಿ, ಹಣ ಮೊಬೈಲ್, ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು. ಮಾಹಿತಿ ಮೇರೆ ದೂರು ಪಡೆದು ಕೇಸ್ ದಾಖಲಿಸಿಕೊಂಡು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಳಿಯಿಂದ ಎರಡು ಆಟೋ, ನಾಲ್ಕು ದ್ವಿಚಕ್ರ ವಾಹನ, ಹದಿಮೂರು ಮೊಬೈಲ್ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.
