ಸಂತೋಷದಾಯಕ ಮತ್ತು ಆರಾಮದಾಯಕ ಪ್ರವಾಸಕ್ಕೆ ರೈಲು ಪ್ರಯಾಣಗಳು ಸೂಕ್ತವಾದುದು. ಕುಟುಂಬದ ಜೊತೆ ಉಲ್ಲಾಸಕರ ಪ್ರಯಾಣ ಮಾಡಲು ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸಾರಿಗೆಗಳಲ್ಲಿ ರೈಲುಗಳೇ ಹೆಚ್ಚು. ಇನ್ನು ರೈಲಿನ ಕೆಲವು ಮಾರ್ಗಗಳಲ್ಲಿ ಪ್ರಯಾಣಿಸುವಾಗ ಪ್ರಕೃತಿಯ ಸೌಂದರ್ಯ ಆಸ್ವಾದಿಸಬಹುದು.
ಹೌದು…. ನಮ್ಮ ಭಾರತದ ಕೆಲವು ರೈಲ್ವೆ ಮಾರ್ಗಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವುದು ವಿಶೇಷವಾದ ಅನುಭವ ನೀಡುತ್ತದೆ. ಜಲಪಾತಗಳು, ಗಿರಿಧಾಮಗಳು, ಆಹ್ಲಾದಕರ ಹಿಮಪಾತ ಸೇರಿದಂತೆ ಇನ್ನೂ ಅನೇಕ ಅದ್ಭುತವಾದ ತಾಣಗಳು ಪ್ರಯಾಣದ ಸಮಯದಲ್ಲಿ ನೋಡುತ್ತೀರಿ.
ಬಹುತೇಕರು ಮಾನ್ಸೂನ್ ವೇಳೆ ಅಂದ್ರೆ ಮಳೆಗಾಲದ ಪ್ರವಾಸವನ್ನ ಹೆಚ್ಚು ಇಷ್ಟಪಡ್ತಾರೆ. ಜೂನ್ ಮೊದಲ ವಾರದಿಂದ ಸೆಪ್ಟೆಂಬರ್ ಅಂತ್ಯದ ವರೆಗೂ ಮಾನ್ಸೂನ್ ಅವಧಿ ಇರಲಿದೆ. ಇದರಿಂದ ರೈಲು ಪ್ರಯಾಣ ಹೆಚ್ಚು ಮಜಾ ನೀಡುತ್ತದೆ. ಅದ್ರಲ್ಲೂ ವಂದೇ ಭಾರತ್ ರೈಲುಗಳು ಭಾರತದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವುದರಿಂದ ಆರಾಮಾಗಿ ಐಷಾರಾಮಿ ರೈಲುಗಳಲ್ಲಿ ಪ್ರವಾಸ ಮಾಡಬಹುದಾಗಿದೆ. ರೈಲು ಸಂಚಾರರದೊಂದಿಗೆ ಪ್ರಕೃತಿಯ ರಮಣೀಯ ದೃಶ್ಯ ಸವಿಯಬಹುದಾಗಿದೆ. ಹಾಗಾದರೆ ಆ ರೈಲ್ವೆ ಮಾರ್ಗಗಳು ಯಾವುವು ಎಂಬುದನ್ನು ಲೇಖನದ ಮೂಲಕ ಮಾಹಿತಿ ಪಡೆಯಿರಿ.

ಕಾಸರಗೋಡಿನಿಂದ ತಿರುವನಂತಪುರಂ:
ಕೇರಳದ ಕರವಾಳಿಯುದ್ಧಕ್ಕೂ ಸಾಗುವ ಈ ಮಾರ್ಗವು ದಕ್ಷಿಣ ರೈಲ್ವೆಯ ಅತ್ಯಂತ ಜನನಿಬಿಡ ಮತ್ತು ವೇಗದ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಕರ್ನಾಟಕದ ಗಡಿಯ ಬಳಿಯ ಕಾಸರಗೋಡಿನಿಂದ ಪ್ರಾರಂಭವಾಗುವ ರೈಲು ಪ್ರಯಾಣವು ದಟ್ಟ ಹಸಿರಿನಿಂದ ಕೂಡಿದ ಪರಿಸರ ಹೊಂದಿದೆ. ಕೋಯಿಕ್ಕೋಡ್, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ ಮತ್ತು ಕೊಲ್ಲಂ ಮೂಲಕ ಪ್ರಯಾಣಿಸಿ ತಿರುವನಂತಪುರಂನಲ್ಲಿ ಕೊನೆಗೊಳ್ಳುತ್ತದೆ. ತಾಳೆ ಮರಗಳಿಂದ ಆವೃತವಾದ ಸುಂದರ ಹಳ್ಳಿಗಳು, ಕಾಲುವೆಗಳು, ಭತ್ತದ ಗದ್ದೆಗಳು, ನದಿ ತೊರೆಗಳು ಹಾಗೂ ದೇವರ ನಾಡಿನ ಗ್ರಾಮಾಂತರದಲ್ಲಿರುವ ಹಳ್ಳಿಗಳ ಸೊಬಗನ್ನು ಸವಿಯಬಹುದಾಗಿದೆ.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್ – 1,540 ರೂ. ನಿಂದ 1,580 ರೂ., ಐಷಾರಾಮಿ ಸೀಟ್ (Executive Chair Car) ವಿಭಾಗ – 2,840 ರೂ. ನಿಂದ 2,860 ರೂ.

ಮಡ್ಗಾಂವ್ (ಗೋವಾ) ನಿಂದ ಮಂಗಳೂರು ಸೆಂಟ್ರಲ್
ಇದು ಭಾರತದ ಅತ್ಯದ್ಭುತ ವಂದೇ ಭಾರತ್ ಪ್ರಯಾಣಗಳಲ್ಲಿ ಒಂದಾಗಿದೆ. ರೈಲು ಕೊಂಕಣ ರೈಲ್ವೆಯ ಮೂಲಕ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ರೈಲು, ಸುರಂಗಗಳು, ಕಾಡುಗಳನ್ನ ಸೀಳಿಕೊಂಡು ಹೋಗುತ್ತದೆ. ನದಿಗಳು ಮತ್ತು ಕರಾವಳಿ ಪ್ರದೇಶಗಳ ಮೂಲಕ ಹಾದುಹೋಗುವ ಅನುಭವ ನಿಜಕ್ಕೂ ಥ್ರಿಲ್ಲಿಂಗ್.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್ – 1,240 ರೂ. ಐಷಾರಾಮಿ ಸೀಟ್ – 2,230 ರೂ.
ಚೆನ್ನೈ ನಿಂದ ಕೊಯಮತ್ತೂರು – ಬೆಟ್ಟದ ಸಾಲುಗಳ ಮಧ್ಯೆ
ಈ ಮಾರ್ಗವು ಜನನಿಬಿಡ ನಗರ ಪ್ರದೇಶದಿಂದ ದೂರವಿದ್ದು, ಹಳ್ಳಿಗಳ ನಡುವೆ ಸಾಗುತ್ತದೆ. ಸ್ವಚ್ಛಂದವಾದ ಹಸಿರಿನಿಂದ ಕೂಡಿದ ಪರಿಸರರೊಂದಿಗೆ ಪ್ರಯಾಣಿಸುತ್ತಾ ಸಮಯ ಕಳೆಯಬಹುದು. ಪ್ರಕೃತಿ ಪ್ರಿಯರಿಗಂತೂ ಸಖತ್ ಥ್ರಿಲ್ ಕೊಡುತ್ತೆ. ಇಲ್ಲಿಂದ ಪ್ರಯಾಣಿಕರು ಊಟಿ, ಕೂನೂರು ಅಥವಾ ವಾಲ್ಪರೈಗೆ ಪ್ರಯಾಣಿಸಬಹುದು. ಕೊಯಮತ್ತೂರಿನಲ್ಲಿ ತಂಗುವವರು ಮರುಧಮಲೈ ದೇವಸ್ಥಾನ ಮತ್ತು ಸಿರುವಾನಿ ಜಲಪಾತಕ್ಕೆ ಭೇಟಿ ನೀಡಬಹುದು. ಹೊಲ, ತೋಟ, ಬೆಟ್ಟದ ಸಾಲುಗಳು ಈ ಮಾರ್ಗದ ಪ್ರಮುಖ ಆಕರ್ಷಣೀಯ ತಾಣಗಳಾಗಿವೆ.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್ – 1,385 ರೂ. ಇರಲಿದ್ದು, ಐಷಾರಾಮಿ ಸೀಟ್ 2,505 ರೂ. ಇರಲಿದೆ.

ಸಬರಮತಿಯಿಂದ ವೆರಾವಲ್ – ತೀರ್ಥಯಾತ್ರೆ ಪ್ರಿಯರಿಗೆ ಹೇಳಿಮಾಡಿಸಿದ್ದು
ಯಾತ್ರಿಕರು ಮತ್ತು ಆಧ್ಯಾತ್ಮ ಪ್ರಿಯರು ಪ್ರವಾಸ ಕೈಗೊಳ್ಳಬಹುದಾದ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಈ ರೈಲು ಅಹಮದಾಬಾದ್‌ನ ಸಬರಮತಿಯನ್ನು ವೆರಾವಲ್‌ಗೆ ಸಂಪರ್ಕಿಸುತ್ತದೆ. ಇದು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ದ್ವಾರವಾಗಿದೆ. ಚಾರ್ ಧಾಮ್ ಇಲ್ಲಿಗೆ ಸಮೀಪದ ತೀರ್ಥಯಾತ್ರೆ ಸ್ಥಳವಾಗಿದೆ.
ಟಿಕೆಟ್ ದರ: ಎಸಿ ಚೇರ್ – 1,105 ರೂ., ಐಷಾರಾಮಿ ಸೀಟ್ 2,110 ರೂ. ವರೆಗೆ ಇರಲಿದೆ.
ರೂರ್ಕೆಲಾದಿಂದ ಪುರಿ – ಜಗನ್ನಾಥ ದೇವಾಲಯಕ್ಕೆ ಸುಲಭ ಎಂಟ್ರಿ
ರೂರ್ಕೆಲಾದಿಂದ ಪ್ರಯಾಣಿಸಿ ಪವಿತ್ರ ನಗರವಾದ ಪುರಿಯಲ್ಲಿ ಕೊನೆಗೊಳ್ಳುವ ಈ ರೈಲು ಪ್ರಸಿದ್ಧ ಜಗನ್ನಾಥ ದೇವಸ್ಥಾನಕ್ಕೆ ಸುಲಭ ಪ್ರವೇಶ ಒದಗಿಸುತ್ತದೆ. ಪ್ರಯಾಣಿಕರು ಪುರಿ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಕೊನಾರ್ಕ್ ಸೂರ್ಯ ದೇವಾಲಯಕ್ಕೆ ಭೇಟಿ ನೀಡಬಹುದು.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್‌ಕಾರ್ – 1,245 ರೂ. ನಿಂದ 1,430 ರೂ. ವರೆಗೆ, ಐಷಾರಾಮಿ ಸೀಟ್ – 2,400 ರೂ. ನಿಂದ 2,615 ರೂ. ವರೆಗೆ

ಕತ್ರಾ – ಶ್ರೀನಗರ
ಕತ್ರಾ ದಿಂದ ಶ್ರೀನಗರ ರೈಲು ಮಾರ್ಗವು ಅದ್ಭುತಗಳ ದಾರಿಯಾಗಿದೆ. ಈ ಮಾರ್ಗದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ‘ಚೆನಾಬ್ ಸೇತುವೆ’ ಇದೆ. ಈ ದಾರಿಯು ಕಿರಿದಾದ ಹಿಮಶಿಖರಗಳ ನಡುವೆ ಸಾಗುತ್ತದೆ. ಇಲ್ಲಿನ ತಾಪಮಾನ ಮೈನಸ್ ಡಿಗ್ರಿಗೆ ತಲುಪಿದಾಗ ವಾತಾವರಣ ಸ್ವರ್ಗದಂತೆ ಭಾಸವಾಗುತ್ತದೆ. ಕಾಶ್ಮೀರ ಕಣಿವೆಯ ಸುಂದರ ನೋಟ ಸವಿಯುತ್ತಾ, ಸುರಂಗಗಳ ಮೂಲಕ ಹಾದು ಹೋಗಬಹುದು.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್‌ಕಾರ್ – 665 ರೂ. ನಿಂದ 720 ರೂ., ಲಕ್ಷುರಿ 1,280 ರೂ. ನಿಂದ 1,330 ರೂ.
ದೆಹಲಿ – ಡೆಹ್ರಾಡೂನ್
ದೆಹಲಿಯ ಬಯಲು ಪ್ರದೇಶದಿಂದ ಈ ಪ್ರಯಾಣ ಆರಂಭವಾಗಿ ಡೆಹ್ರಾಡೂನ್ ಕಣಿವೆಯಲ್ಲಿ ಕೊನೆಗೊಳ್ಳುತ್ತದೆ. ಈ ಮಾರ್ಗದಲ್ಲಿ ಪುಣ್ಯಕ್ಷೇತ್ರವಾದ ಹರಿದ್ವಾರ ದಾಟಿದ ನಂತರ, ಶಿವಾಲಿಕ್ ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳ ಮೂಲಕ ಹಾದುಹೋಗುತ್ತದೆ. ಹಿಮಾಲಯದ ಅದ್ಭುತವಾದ ನೋಟವನ್ನು ವೀಕ್ಷಿಸಬಹುದು.
ಟಿಕೆಟ್ ದರ (ಒಂದು ಕಡೆಗೆ): ಎಸಿ ಚೇರ್‌ಕಾರ್ – 1,077 ರೂ., ಲಕ್ಷುರಿ ಟಿಕೆಟ್ – 1,903 ರೂ.
