ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದದ (Ceasefire Agreement) ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್‌ಗೆ (Iran) ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಒಪ್ಪಂದ ಉಲ್ಲಂಘಿಸಿದರೆ ಬಾಂಬ್ ದಾಳಿ ನಡೆಸುವುದಾಗಿ ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಒಪ್ಪಂದವನ್ನು ಗೌರವಿಸಬೇಕು. ಒಪ್ಪಂದ ಉಲ್ಲಂಘಿಸಿದರೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ಅಧ್ಯಕ್ಷರು ಬುಧವಾರ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಮಾತನಾಡಿದ ಟ್ರಂಪ್, ಇರಾನ್ ಒಪ್ಪಂದದ ಷರತ್ತುಗಳನ್ನು ಪಾಲಿಸದಿದ್ದರೆ ಅಮೆರಿಕ ಮತ್ತೆ ಸೇನಾ ಕ್ರಮಕ್ಕೆ ಮುಂದಾಗಲಿದೆ ಎಂದು ಹೇಳಿದ್ದಾರೆ. ಮುಂದಿನ 60 ದಿನಗಳ ಮಾತುಕತೆ ಶಾಶ್ವತ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: 28,350 ಕೋಟಿ ಪರಿಹಾರ, ಇರಾನ್ ಮೇಲಿನ ನಿರ್ಬಂಧ ತೆರವು – 14 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ
ಇರಾನ್ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಟ್ರಂಪ್ ತಮ್ಮ ಹಿಂದಿನ ನಿಲುವಿನಿಂದ ಸ್ವಲ್ಪ ಮೃದು ಧೋರಣೆ ತೋರಿದ್ದಾರೆ. ಕೆಲವು ಭದ್ರತಾ ಸಾಮರ್ಥ್ಯಗಳನ್ನು ಹೊಂದಿರುವುದು ಅಕ್ರಮವಲ್ಲ ಎಂದು ಹೇಳಿದ್ದಾರೆ.
ಇರಾನ್ ನಾಯಕರು ಟ್ರಂಪ್ ಹೇಳಿಕೆಗೆ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಪ್ಪಂದಕ್ಕೆ ಸಹಿ ಹಾಕಿರುವ ಚಿತ್ರಗಳನ್ನು ಬಿಡುಗಡೆ ಮಾಡಿ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಇರಾನ್‌ನ ಮುಖ್ಯ ಸಮಾಲೋಚಕ ಮೊಹಮ್ಮದ್ ಬಕರ್ ಖಲೀಬಾಫ್ ಯುದ್ಧದ ಮೂಲಕ ಪಡೆಯಲು ಯತ್ನಿಸಿದ್ದಕ್ಕಿಂತ ಹೆಚ್ಚು ಲಾಭವನ್ನು ನಾವು ಮಾತುಕತೆಯ ಮೂಲಕ ಪಡೆದಿದ್ದೇವೆ. ಈ ಒಪ್ಪಂದದ ಭಾಗವಾಗಿ ಇರಾನ್‌ನ ಸ್ಥಗಿತಗೊಂಡಿದ್ದ ಸಾವಿರಾರು ಕೋಟಿ ಡಾಲರ್ ಮೌಲ್ಯದ ಆಸ್ತಿಗಳ ಬಿಡುಗಡೆಗೂ ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಸಂಘರ್ಷ ಆರಂಭವಾಗಿತ್ತು. ನಂತರ ಅದು ಪ್ರಾದೇಶಿಕ ಯುದ್ಧವಾಗಿ ವಿಸ್ತರಿಸಿತು. ಈ ಯುದ್ಧದಲ್ಲಿ 7,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಸಾವುಗಳು ಇರಾನ್ ಮತ್ತು ಲೆಬನಾನ್‌ನಲ್ಲಿ ವರದಿಯಾಗಿವೆ. ಯುದ್ಧದಿಂದ ಜಾಗತಿಕ ಇಂಧನ ಬೆಲೆ ಏರಿಕೆಯಾಗಿತ್ತು. ಹಣದುಬ್ಬರ ಹೆಚ್ಚಳವಾಗಿತ್ತು. ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಭದ್ರತೆ ಕುರಿತ ಆತಂಕವೂ ಹೆಚ್ಚಾಗಿತ್ತು. ಇದೀಗ ಶಾಂತಿ ಒಪ್ಪಂದದಿAದ ಮಧ್ಯಪ್ರಾಚ್ಯದಲ್ಲಿ ಶಾಂತಿಯ ನಿರೀಕ್ಷೆ ಮೂಡಿದೆ. ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಅಮೆರಿಕ – ಇರಾನ್ ಸಹಿ; ತಕ್ಷಣದಿಂದಲೇ ಹಾರ್ಮುಜ್ ಜಲಸಂಧಿ ಓಪನ್
