– ಉಭಯ ದೇಶಗಳಿಂದ ಸಹಿ ಮಾಡಿದ ಒಪ್ಪಂದ ಪತ್ರ ಬಿಡುಗಡೆ
ವಾಷಿಂಗ್ಟನ್/ಪ್ಯಾರಿಸ್: ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (US Iran Peace Deal) ಎರಡೂ ದೇಶಗಳು ಡಿಜಿಟಲ್ ಮೂಲಕ ಔಪಚಾರಿಕವಾಗಿ ಸಹಿ ಹಾಕಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದೃಢಪಡಿಸಿದ್ದಾರೆ.
ಒಪ್ಪಂದಕ್ಕೆ ಈಗ ಎರಡೂ ಕಡೆಯವರು ಅಧಿಕೃತವಾಗಿ ಸಹಿ ಹಾಕಿದ್ದು, ಅದರಡಿ ಉಭಯ ದೇಶಗಳು ಕೈಗೊಂಡಿರುವ ಬದ್ಧತೆಗಳು ಜಾರಿಗೆ ಬಂದಿವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಯುದ್ಧಕ್ಕೆ ವಿರಾಮ ಸಿಕ್ಕಿದೆ. ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಅಮೆರಿಕ – ಇರಾನ್ ಸಹಿ; ತಕ್ಷಣದಿಂದಲೇ ಹಾರ್ಮುಜ್ ಜಲಸಂಧಿ ಓಪನ್
Le Président Trump a signé ce soir à Versailles l’accord entre l’Iran et les États-Unis.
Cet accord ouvre la voie à une paix durable et permet la réouverture du détroit d’Ormuz.
C’est un pas important dans la bonne direction pour nos compatriotes… pic.twitter.com/b1XgZrBv0m
— Emmanuel Macron (@EmmanuelMacron) June 18, 2026
ಯುಎಸ್ ಅಧ್ಯಕ್ಷ ಟ್ರಂಪ್ ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಅವರ ಜೊತೆಗಿನ ಔತಣ ಕೂಟದ ವೇಳೆ ಅಮೆರಿಕ-ಇರಾನ್ ಒಪ್ಪಂದದ ಮುದ್ರಿತ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಿದರು. ಸಹಿ ಮಾಡಿದ ಒಪ್ಪಂದದ ಪ್ರತಿಗಳನ್ನ ಇರಾನ್ ಮತ್ತು ಮಧ್ಯಸ್ಥಿಕೆ ವಹಿಸುವ ದೇಶಗಳಿಗೆ ಕಳುಹಿಸಲಾಗಿದೆ.
ನಿಗದಿತ ಸಮಯದ ಪ್ರಕಾರ ನಾಳೆ (ಶುಕ್ರವಾರ) ಜಿನೇವಾದಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದ್ರೆ ಒಂದು ದಿನ ಮೊದಲೇ ಒಪ್ಪಂದಕ್ಕೆ ಸಹಿ ಮಾಡಿರುವುದು ಗಮನಾರ್ಹವಾಗಿದೆ. ಸದ್ಯ ಒಪ್ಪದದಲ್ಲಿ 14 ಅಂಶಗಳನ್ನ ಪ್ರಸ್ತಾಪಿಸಲಾಗಿದ್ದು, ಜಾರಿಗೆ ತರುವುದು ಅಗ್ನಿಪರೀಕ್ಷೆಯಾಗಿದೆ. ಒಪ್ಪಂದದ ಎಲ್ಲಾ ಅಂತಿಮ ನಿಯಮಗಳ ಮಾತುಕತೆ ನಡೆಸಲು ಇನ್ನೂ 60 ದಿನಗಳು ಬೇಕಾಗುತ್ತದೆ ಹೇಳಲಾಗಿದೆ. ಇದನ್ನೂ ಓದಿ: ಮೋದಿ ಶಾಂತ, ಸಂಯಮಶೀಲ, ಒಬ್ಬ ಪಕ್ಕಾ ಕಿಲ್ಲರ್: ಟ್ರಂಪ್ ಹೊಗಳಿಕೆ

ಒಪ್ಪಂದದ 14 ಅಂಶಗಳು ಏನಿವೆ?
1) ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಅಮೆರಿಕ ಮತ್ತು ಇರಾನ್ ಎಲ್ಲಾ ರಂಗಗಳಲ್ಲಿಯೂ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ನಿಲ್ಲಿಸುವುದಾಗಿ ಘೋಷಿಸುತ್ತದೆ. ಎರಡೂ ಕಡೆಯವರು ಇನ್ನು ಮುಂದೆ ಪರಸ್ಪರ ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತವೆ. ಅಲ್ಲದೆ, ಲೆಬನಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನ ಗೌರವಿಸಲಾಗುತ್ತದೆ.
2) ಅಮೆರಿಕ ಮತ್ತು ಇರಾನ್ ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತವೆ. ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
3) ಎರಡೂ ದೇಶಗಳು 60 ದಿನಗಳಲ್ಲಿ ಮಾತುಕತೆಗಳ ಮೂಲಕ ಅಂತಿಮ ಒಪ್ಪಂದವನ್ನ ತಲುಪಲು ಮತ್ತು ಪೂರ್ಣಗೊಳಿಸಲು ಬದ್ಧವಾಗಿವೆ. ಎರಡೂ ಪಕ್ಷಗಳು ಒಪ್ಪಿದರೆ ಈ ಅವಧಿಯನ್ನ ವಿಸ್ತರಿಸಬಹುದು.
4) ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಅಮೆರಿಕವು ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನ ಮತ್ತು ಇತರ ನಿರ್ಬಂಧಗಳನ್ನ ತೆಗೆದುಹಾಕಲು ಒಪ್ಪುತ್ತದೆ. ಮುಂದಿನ 30 ದಿನಗಳಲ್ಲಿ ದಿಗ್ಬಂಧನ ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಈ ಅವಧಿಯಲ್ಲಿ, ಇರಾನ್ ಕ್ರಮೇಣ ಯುದ್ಧಪೂರ್ವ ಮಟ್ಟಕ್ಕೆ ಹಡಗು ಸಂಚಾರವನ್ನು ಪುನಃಸ್ಥಾಪಿಸುತ್ತದೆ.
5) ಅಂತಿಮ ಒಪ್ಪಂದದ 30 ದಿನಗಳಲ್ಲಿ ಇರಾನ್ ಪಕ್ಕದ ಪ್ರದೇಶಗಳಿಂದ ತನ್ನ ಮಿಲಿಟರಿ ಉಪಸ್ಥಿತಿ ಮತ್ತು ಪಡೆಗಳನ್ನು ಹಿಂತೆಗೆದುಕೊಳ್ಳುವುದಾಗಿ ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಇರಾನ್ ಪರ್ಷಿಯನ್ ಕೊಲ್ಲಿಯಿಂದ ಓಮನ್ ಸಮುದ್ರಕ್ಕೆ ಪ್ರಯಾಣಿಸುವ ವಾಣಿಜ್ಯ ಹಡಗುಗಳಿಗೆ ಮತ್ತು 60 ದಿನಗಳವರೆಗೆ ಹಿಂತಿರುಗಲು ಉಚಿತ ಮತ್ತು ಸುರಕ್ಷಿತ ಮಾರ್ಗ ಒದಗಿಸುತ್ತದೆ. ವಾಣಿಜ್ಯ ಸಾಗಣೆ ತಕ್ಷಣವೇ ಪುನರಾರಂಭಗೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯಲ್ಲಿ ನಿರಂತರ ಸಮುದ್ರ ಸೇವೆಗಳನ್ನು ಸ್ಥಾಪಿಸಲು ಇರಾನ್ ಒಮಾನ್ ಜೊತೆ ಮಾತುಕತೆ ನಡೆಸುತ್ತದೆ.

6) ಇರಾನ್‌ನ ಪುನರ್ವಸತಿ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ಅಭಿವೃದ್ಧಿಪಡಿಸಲು ಯುನೈಟೆಡ್ ಸ್ಟೇಟ್ಸ್ ತನ್ನ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಪ್ರತಿಜ್ಞೆ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಕನಿಷ್ಠ 300 ಶತಕೋಟಿ ಡಾಲರ್ (25,362 ಕೋಟಿ ರೂ.) ಪರಿಹಾರ ನೀಡಲಿದೆ. ಅಂತಿಮ ಒಪ್ಪಂದದ ಭಾಗವಾಗಿ, ಈ ಯೋಜನೆಯ ಅನುಷ್ಠಾನವನ್ನ 60 ದಿನಗಳಲ್ಲಿ ಅಂತಿಮಗೊಳಿಸಲಾಗುತ್ತದೆ.
7) ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನ ತೆಗೆದುಹಾಕಲು ಅಮೆರಿಕ ಒಪ್ಪಿದೆ. ಇದರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ನಿರ್ಣಯಗಳ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳು, IAEA ಆಡಳಿತ ಮಂಡಳಿಯ ನಿರ್ಣಯಗಳಿಗೆ ಸಂಬಂಧಿಸಿದ ನಿರ್ಬಂಧಗಳು ಮತ್ತು ಯುನೈಟೆಡ್ ಸ್ಟೇಟ್ಸ್ ವಿಧಿಸಿರುವ ಎಲ್ಲಾ ಏಕಪಕ್ಷೀಯ ಪ್ರಾಥಮಿಕ ಮತ್ತು ದ್ವಿತೀಯಕ ನಿರ್ಬಂಧಗಳು ಸೇರಿವೆ.
8) ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ನಿರ್ಬಂಧಗಳನ್ನು ಸಡಿಲಿಸುವ ವಿಷಯವು ಅತ್ಯಂತ ಮಹತ್ವದ್ದಾಗಿದೆ ಎಂದು ಗುರುತಿಸುತ್ತವೆ ಮತ್ತು ಈ ವಿಷಯದ ಕುರಿತು ತಕ್ಷಣ ಮಾತುಕತೆ ಪ್ರಾರಂಭಿಸಲು ಮತ್ತು ಪರಸ್ಪರ ಒಪ್ಪಿದ ಒಪ್ಪಂದ ತಲುಪಲು ಗಂಭೀರ ಪ್ರಯತ್ನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುತ್ತವೆ.
9) ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಒಪ್ಪಂದವು ದೃಢಪಡಿಸುತ್ತದೆ ಎಂದು ಹೇಳುತ್ತದೆ. ಇರಾನ್‌ನ ಪುಷ್ಟೀಕರಿಸಿದ ಪರಮಾಣು ವಸ್ತುಗಳ ದಾಸ್ತಾನಿನ ಭವಿಷ್ಯದ ನಿರ್ವಹಣೆ ಮತ್ತು ವಿಲೇವಾರಿಯನ್ನು ಎರಡೂ ಕಡೆಯವರು ಪರಸ್ಪರ ಒಪ್ಪಿಕೊಳ್ಳುವ ಕಾರ್ಯವಿಧಾನದ ಮೂಲಕ ಪರಿಹರಿಸಲಾಗುವುದು ಎಂದು ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ಒಪ್ಪಿಕೊಂಡವು.
10) ಯುರೇನಿಯಂ ಪುಷ್ಟೀಕರಣ ಮತ್ತು ಇರಾನ್‌ನ ಶಾಂತಿಯುತ ಪರಮಾಣು ಅಗತ್ಯಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಚರ್ಚಿಸಲು ಎರಡೂ ಕಡೆಯವರು ಒಪ್ಪಿದ್ದಾರೆ. ಈ ಚರ್ಚೆಗಳು ಅಂತಿಮ ಹಂತದ ಒಪ್ಪಂದದಲ್ಲಿ ಇದರಲಿದೆ. ಅಮೆರಿಕ ಮತ್ತು ಇರಾನ್ ಎರಡೂ ದೇಶಗಳ ನಡುವಿನ ಅಂತಿಮ ಒಪ್ಪಂದದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪುತ್ತವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಪ್ರಸ್ತುತ ಸ್ಥಿತಿಯನ್ನು ಕಾಯ್ದುಕೊಳ್ಳುತ್ತದೆ ಮತ್ತು ಯುಎಸ್ ಯಾವುದೇ ಹೊಸ ನಿರ್ಬಂಧ ವಿಧಿಸುವುದಿಲ್ಲ ಅಥವಾ ಈ ಪ್ರದೇಶದಲ್ಲಿ ಹೆಚ್ಚುವರಿ ಮಿಲಿಟರಿ ಪಡೆ ನಿಯೋಜಿಸುವುದಿಲ್ಲ.
11) ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮತ್ತು ಇರಾನ್ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ತೆಗೆದುಹಾಕುವವರೆಗೆ, ಯುಎಸ್ ಖಜಾನೆ ಇಲಾಖೆಯು ಇರಾನಿನ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇತರ ಸಂಬಂಧಿತ ಉತ್ಪನ್ನಗಳ ರಫ್ತಿಗೆ ಅಗತ್ಯವಾದ ವಿನಾಯಿತಿ ನೀಡುತ್ತದೆ ಎಂದು ಯುಎಸ್ ಭರವಸೆ ನೀಡಿತು. ಇದಲ್ಲದೆ, ಬ್ಯಾಂಕಿಂಗ್ ವಹಿವಾಟುಗಳು, ವಿಮೆ, ಸಾರಿಗೆ ಇತ್ಯಾದಿಗಳಂತಹ ಈ ರಫ್ತಿಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಸಹ ಇದು ಅಧಿಕೃತಗೊಳಿಸುತ್ತದೆ.
12) ಒಪ್ಪಂದ ಜಾರಿಗೆ ಬಂದ ನಂತರ, ಇರಾನ್‌ನ ಸ್ಥಗಿತಗೊಳಿಸಿದ ಅಥವಾ ನಿರ್ಬಂಧಿತ ಸ್ವತ್ತುಗಳನ್ನು ಅಮೆರಿಕ ಸಂಪೂರ್ಣವಾಗಿ ಬಿಡುಗಡೆ ಮಾಡಲಿದೆ. ಮಾತುಕತೆಗಳ ಸಮಯದಲ್ಲಿ ಈ ಸ್ಥಗಿತಗೊಳಿಸಿದ ಸ್ವತ್ತುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಅಮೆರಿಕ ಮತ್ತು ಇರಾನ್ ಪರಸ್ಪರ ನಿರ್ಧರಿಸುತ್ತವೆ.
13) ಈ ತಿಳುವಳಿಕೆ ಒಪ್ಪಂದದ ಯಶಸ್ವಿ ಅನುಷ್ಠಾನ ಮತ್ತು ಅಂತಿಮ ಒಪ್ಪಂದಕ್ಕೆ ಭವಿಷ್ಯದಲ್ಲಿ ಬದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಕಾರ್ಯನಿರ್ವಾಹಕ ಕಾರ್ಯವಿಧಾನವನ್ನ ಸ್ಥಾಪಿಸಲು ಅಮೆರಿಕ ಮತ್ತು ಇರಾನ್ ಒಪ್ಪಿಕೊಂಡಿವೆ.
14) ಅಮೆರಿಕ ಮತ್ತು ಇರಾನ್ ನಡುವಿನ ಈ ಅಂತಿಮ ಒಪ್ಪಂದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಅನುಮೋದಿಸುತ್ತದೆ.
