ನವದೆಹಲಿ: ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆ ವಿಧಿಸುವ ಕಾನೂನುಗಳು ಇಂದಿನ ಜನಸಂಖ್ಯಾ ಪರಿಸ್ಥಿತಿಯಲ್ಲಿ ಪ್ರಸ್ತುತತೆ ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಭಾರತದಲ್ಲಿ ಒಟ್ಟು ಜನನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎರಡು ಮಕ್ಕಳ ನಿಯಮದ ಆಧಾರದಲ್ಲಿ ಜಾರಿಯಲ್ಲಿರುವ ಕಾನೂನುಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾ. ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 2003ರಲ್ಲಿ ಜಾವೇದ್ ವಿರುದ್ಧ ಹರಿಯಾಣ ರಾಜ್ಯ ಪ್ರಕರಣದಲ್ಲಿ ಮೂರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪನ್ನು ಮರುಪರಿಶೀಲನೆಗಾಗಿ ದೊಡ್ಡ ಪೀಠಕ್ಕೆ ವರ್ಗಾಯಿಸಿದೆ.
2003ರ ತೀರ್ಪಿನಲ್ಲಿ ಹರಿಯಾಣ ಪಂಚಾಯತ್ ರಾಜ್ ಕಾಯ್ದೆಯಡಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹರು ಎಂಬ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.ಇದನ್ನೂ ಓದಿ: ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ ಕಡಿವಾಣ – ಒಂದಕ್ಕಿಂತ ಹೆಚ್ಚು ಮದುವೆಯಾದ್ರೆ ಸರ್ಕಾರಿ ನೌಕರರಿಗೆ ಕೆಲಸದಿಂದ ಗೇಟ್ಪಾಸ್
ಪ್ರಸ್ತುತ ಭಾರತದಲ್ಲಿ ಒಟ್ಟು ಫಲವತ್ತತೆ ದರ (ಜನನ ಪ್ರಮಾಣ) 1.9ಕ್ಕೆ ಇಳಿದಿದೆ. 2003ರಲ್ಲಿ ಇದು 3ರಷ್ಟಿತ್ತು. ಜನಸಂಖ್ಯೆ ಸ್ಥಿರವಾಗಿ ಮುಂದುವರಿಯಲು ಅಗತ್ಯವಿರುವ ಬದಲಿ ಫಲವತ್ತತೆ ದರ 2.1 ಆಗಿದೆ. ಈ ಪ್ರಮಾಣಕ್ಕಿಂತ ಫಲವತ್ತತೆ ದರ ಕಡಿಮೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಳವಾಗುವ ಮತ್ತು ದುಡಿಯುವ ವಯೋಮಾನದ ಜನರ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಗಮನಿಸಿದೆ.
ಜನಸಂಖ್ಯಾ ಹೆಚ್ಚಳದ ಭೀತಿಯ ಆಧಾರದಲ್ಲಿ ರೂಪಿಸಲಾದ ಎರಡು ಮಕ್ಕಳ ನಿಯಮಗಳು ಈಗಿನ ಬದಲಾಗಿರುವ ಜನಸಂಖ್ಯಾ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ. ಇಂತಹ ಬದಲಾವಣೆಗಳನ್ನು ನಿರ್ಲಕ್ಷಿಸಿದರೆ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದೇ ಪ್ರಕರಣದಲ್ಲಿ ಮಹಾರಾಷ್ಟ್ರದ ಕಾಕೋಡಾ ಗ್ರಾಮ ಪಂಚಾಯತ್ನ ಮಾಜಿ ಸರಪಂಚ್ ಮಂಗಳಾ ಭೀಮರಾವ್ ಅವರಿಗೆ ಮೂರನೇ ಮಗು ಜನಿಸಿದ ಕಾರಣ ವಿಧಿಸಲಾಗಿದ್ದ ಅನರ್ಹತೆಯನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯ್ದೆಯ ಸೆಕ್ಷನ್ 14(1)(ಜೆ-1) ಅಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಅನರ್ಹತೆ ವಿಧಿಸುವ ನಿಯಮ ಜಾರಿಯಲ್ಲಿತ್ತು.ಇದನ್ನೂ ಓದಿ: ಕೊಡಗಿನಲ್ಲಿ ವರುಣನ ಅಬ್ಬರ; ಮಡಿಕೇರಿ ಸುತ್ತಮುತ್ತ ಎಡೆಬಿಡದೆ ಸುರಿಯುತ್ತಿರುವ ಮಳೆ
ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕಾರಣಕ್ಕೆ ವ್ಯಕ್ತಿಗಳನ್ನು ರಾಜಕೀಯ ಪ್ರಾತಿನಿಧ್ಯದಿಂದ ಹೊರಗಿಡುವುದು ಅವರ ಸಾರ್ವಜನಿಕ ಹುದ್ದೆ ನಿರ್ವಹಿಸುವ ಸಾಮರ್ಥ್ಯಕ್ಕೆ ಸಂಬಂಧಿಸದ ಮಾನದಂಡವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಮಕ್ಕಳನ್ನು ಹೊಂದುವ ಹಕ್ಕು ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕಿನ ನಡುವೆ ಆಯ್ಕೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಇದು ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ವೈಯಕ್ತಿಕ ಸ್ವಾಯತ್ತತೆಯ ಹಕ್ಕಿಗೂ ಸಂಬಂಧಿಸಿದೆ ಎಂದು ಪೀಠ ತಿಳಿಸಿದೆ.
ದೇಶದ ಏಳು ರಾಜ್ಯಗಳು ಎರಡು ಮಕ್ಕಳ ನಿಯಮವನ್ನು ರದ್ದುಗೊಳಿಸಿದ್ದು, 15 ರಾಜ್ಯಗಳಲ್ಲಿ ಇಂತಹ ನೀತಿ ಜಾರಿಯಲ್ಲಿಲ್ಲ ಎಂದು ಪ್ರಕರಣದಲ್ಲಿ ಸಲ್ಲಿಸಲಾದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಅಸ್ಸಾಂ, ಗೋವಾ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರಾಖಂಡ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ನಿಯಮ ಮುಂದುವರಿದಿದೆ. ಎರಡು ಮಕ್ಕಳ ನಿಯಮಕ್ಕೆ ಸಂಬಂಧಿಸಿದ ಹಿಂದಿನ ತೀರ್ಪುಗಳ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಈಗ ದೊಡ್ಡ ಪೀಠಕ್ಕೆ ವಿಷಯವನ್ನು ವರ್ಗಾಯಿಸಿದೆ.ಇದನ್ನೂ ಓದಿ: ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಡಿಕೆಶಿ ಪುತ್ರ ಆಕಾಶ್
