ಭಾರತವು ಒಂದು ಜಾತ್ಯತೀತ ದೇಶ ಎಂಬುದನ್ನು ನೆನಪಿಸಿರುವ ಬಾಂಬೆ ಹೈಕೋರ್ಟ್, ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ವಿರುದ್ಧ ರಾಜಕಾರಣಿಗಳು ನಡೆಸಿದ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜಾಗೃತಿ ಮೂಡಿಸಿದ್ದ ವೀಡಿಯೊವನ್ನು ಮುಂಬೈ ಮಹಾನಗರ ಪಾಲಿಕೆ ತನ್ನ ಸೋಷಿಯಲ್ ಮೀಡಿಯಾ ಖಾತೆಯಿಂದ ತೆಗೆದುಹಾಕಿತ್ತು. ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಅಮಿತ್ ಸತಮ್ ಆಕ್ಷೇಪದ ಬಳಿಕ ಪಾಲಿಕೆ ವೀಡಿಯೊವನ್ನು ಡಿಲೀಟ್ ಮಾಡಿತ್ತು. ಪಾಲಿಕೆಯ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ತಕ್ಷಣವೇ ಆ ವೀಡಿಯೊವನ್ನು ಮರು-ಅಪ್ಲೋಡ್ ಮಾಡುವಂತೆ ಮುಂಬೈ ಮಹಾನಗರ ಪಾಲಿಕೆಗೆ ಆದೇಶ ನೀಡಿದೆ.
ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ಉನ್ನತ ನ್ಯಾಯಪೀಠವು, ಪರಿಸರ ಜಾಗೃತಿ, ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವ ಸದುದ್ದೇಶದಿಂದ ಮಾಡಿದ ವಿಡಿಯೋಗೆ ರಾಜಕೀಯ ಹಾಗೂ ಧಾರ್ಮಿಕ ಬಣ್ಣ ಬಳಿದಿರುವುದು ಅತ್ಯಂತ ದುರದೃಷ್ಟಕರ ಎಂದಿದೆ.
ಈ ಮಧ್ಯೆ, ಹಿಂದೂ ಹಬ್ಬಗಳಲ್ಲಿ ಮಾತ್ರ ಇವರಿಗೆ ಪರಿಸರ ನೆನಪಾಗುತ್ತೆ. ಆದರೆ ಈದ್, ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ, ಪ್ರಾಣಿ ಬಲಿಯಿಂದಾಗಿ ನೀರಿನ ಮಾಲಿನ್ಯ ಉಂಟಾದಾಗ, ನಾಸೀರುದ್ದೀನ್ ಶಾ ಮತ್ತು ದಿಯಾ ಮಿರ್ಜಾ ಒಂದೂ ಮಾತನಾಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕಿಡಿಕಾರಿದ್ದಾರೆ.
