ತಿರುವನಂತಪುರಂ: ಪ್ರಯಾಗರಾಜ್ ಕುಂಭಮೇಳದ ಸಮಯದಲ್ಲಿ ಜನಪ್ರಿಯತೆ ಗಳಿಸಿದ್ದ ಯುವತಿ ಮೊನಾಲಿಸಾ ಭೋಸ್ಲೆ (Monalisa Bhosle0 ಸಲ್ಲಿಸಿದ ಜನನ ಪ್ರಮಾಣಪತ್ರವನ್ನ ಬುಧವಾರ (ಇಂದು) ಕೇರಳ ಹೈಕೋರ್ಟ್ (Kerala Highcourt) ಪರಿಗಣಿಸಿದೆ. ಜೊತೆಗೆ ಪ್ರಾಥಮಿಕವಾಗಿ ಆಕೆ ಪ್ರಬುದ್ಧಳಾಗಿದ್ದಾಳೆ ಎಂದು ಕೋರ್ಟ್ ಹೇಳಿದೆ.
ಮಧ್ಯಪ್ರದೇಶ ಪೊಲೀಸರು ದಾಖಲಿಸಿರುವ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಭೋಸ್ಲೆ ಮತ್ತು ಪತಿ ಮೊಹಮ್ಮದ್ ಫರ್ಮಾನ್ (Mohd Farman) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅವರ ತಂದೆ ತಮ್ಮ ಮದುವೆಯ ಸಮಯದಲ್ಲಿ ತಾನು ಅಪ್ರಾಪ್ತಳಾಗಿದ್ದೆ ಎಂದು ಹೇಳಿಕೊಂಡಿದ್ದರು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೊಹಮ್ಮದ್ ಫರ್ಮಾನ್‌ಗೆ 1 ತಿಂಗಳ ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದೆ.

ಇದರಿಂದಾಗಿ ಫರ್ಮಾನ್ ನಿರೀಕ್ಷಣಾ ಜಾಮೀನು ಪಡೆಯಲು ಮಧ್ಯಪ್ರದೇಶದ ಕೋರ್ಟ್‌ಗೆ (Madhya Pradesh Court) ತೆರಳಬಹುದಾಗಿದೆ. ಟ್ರಾನ್ಸಿಟ್ ಬೇಲ್ ಮಂಜೂರು ಮಾಡಿದ ಕೋರ್ಟ್ 1 ತಿಂಗಳವರೆಗೆ ಅರ್ಜಿದಾರರನ್ನ ಬಂಧಿಸದಂತೆ ಆದೇಶ ಕೂಡ ಮಾಡಿದೆ.
ಟ್ರಾನ್ಸಿಟ್ ಬೇಲ್ ಅಂದ್ರೆ ಏನು?
ಟ್ರಾನ್ಸಿಟ್ ಜಾಮೀನು (Transit Anticipatory Bail) ಎಂದರೆ, ನಿಮ್ಮ ವಿರುದ್ಧ ಬೇರೆ ರಾಜ್ಯದಲ್ಲಿ ಪ್ರಕರಣ ದಾಖಲಾಗಿದ್ದು, ಅಲ್ಲಿಗೆ ಪ್ರಯಾಣಿಸಿ ನಿರೀಕ್ಷಣಾ ಜಾಮೀನು ಪಡೆಯುವವರೆಗೂ ಬಂಧನದಿಂದ ರಕ್ಷಣೆ ಪಡೆಯಲು ನೀವು ಪ್ರಸ್ತುತ ಇರುವ ಸ್ಥಳದ ನ್ಯಾಯಾಲಯದಿಂದ (High Court ಅಥವಾ Sessions Court) ಪಡೆಯುವ ತಾತ್ಕಾಲಿಕ ಜಾಮೀನು.

ಮಧ್ಯಪ್ರದೇಶ ಪೊಲೀಸರ ಪರವಾಗಿ ಹಾಜರಾದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASGI) ಎಸ್.ವಿ ರಾಜು, ಭೋಸ್ಲೆ ಅಪ್ರಾಪ್ತ ವಯಸ್ಕಳಾಗಿದ್ದು, ಜನನ ಪ್ರಮಾಣಪತ್ರವು ನಕಲಿ ಎಂದು ವಾದಿಸಿದ್ದರು. ಆದಾಗ್ಯೂ, ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರಿದ್ದ ಪೀಠ ಆಕೆಯ ಜನನ ಪ್ರಮಾಣಪತ್ರ ಪರಿಶೀಲಿಸಿದ ನಂತರ, ಪ್ರಾಥಮಿಕವಾಗಿ ಆಕೆಯ ಜನ್ಮ ದಿನಾಂಕ ಜನವರಿ 1, 2008 ಎಂದು ತೋರಿಸುತ್ತಿದೆ. ಆದ್ದರಿಂದ, ಆಕೆ ಪ್ರಬುದ್ಧಳಾಗಿದ್ದಾಳೆ ಎಂದು ಹೇಳಿತು.
ಜನನ ಪ್ರಮಾಣಪತ್ರದ ಜೊತೆಗೆ, ಅರ್ಜಿದಾರರು (ವೈರಲ್ ಕುಂಭಮೇಳ ಹುಡುಗಿ) ಸಲ್ಲಿಸಿದ್ದ ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್ ಸಹ ಅವರ ಜನ್ಮ ದಿನಾಂಕ ಜನವರಿ 1, 2008 ಎಂದೇ ತೋರಿಸುತ್ತಿವೆ. ಹೀಗಾಗಿ, ಅರ್ಜಿದಾರರು (ಫರ್ಮನ್ ಮತ್ತು ಮೊನಾಲಿಸಾ) ಸಲ್ಲಿಸಿದ ದಾಖಲೆಗಳು ಆಕೆ ಪ್ರಬುದ್ಧಳಾಗಿದ್ದಾಳೆ ಎಂಬುದನ್ನು ತೋರಿಸಿವೆ ಎಂದು ಹೇಳಿ, ಪತಿ ಮೊಹಮ್ಮದ್ ಫರ್ಮಾನ್‌ಗೆ ಜಾಮೀನು ಮಂಜೂರು ಮಾಡಿದೆ.

ಏನಿದು ವಿವಾದ?
2025 ರ ಕುಂಭಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರುತ್ತಿದ್ದ ಮೊನಾಲಿಸಾಳ ವಿಡಿಯೋ ಸಖತ್ ವೈರಲ್ ಆಗಿತ್ತು. ಇದಾದ ಬಳಿಕ ಮೊನಾಲಿಸಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಈ ವರ್ಷದ ಆರಂಭದಲ್ಲಿ ಅವರು ಕೇರಳದಲ್ಲಿ ಫರ್ಮಾನ್ ಖಾನ್ ಅವರನ್ನ ವರಿಸಿದ್ದರು. ಇದಾದ ಬಳಿಕ ಅವರು ಮದುವೆಯಾಗಲು ಕಾನೂನು ನಿಗದಿಪಡಿಸಿರುವ ವಯಸ್ಸನ್ನು ದಾಟಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದು ಮೊನಾಲಿಸಾ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಮೊನಾಲಿಸಾ ಪರ ವಕೀಲ ಎಂ. ಸಸೀಂದ್ರನ್ ಕೆಲವು ಗುಂಪುಗಳು ಹಾಗೂ ಮಧ್ಯಪ್ರದೇಶದ ಆಡಳಿತ ಮೊನಾಲಿಸಾ ಅವರನ್ನು ಅಪ್ರಾಪ್ತೆ ಎಂದು ಬಿಂಬಿಸುವ ಮೂಲಕ ಅವರ ವೈವಾಹಿಕ ಜೀವನ ಮುರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದ್ದರು.
ಮದುವೆಯ ಸಮಯದಲ್ಲಿ ತಾವು ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದೆವು ಎಂದು ದಂಪತಿ ತಿಳಿಸಿದ್ದಾರೆ. ಆದರೆ, ತಮ್ಮ ಮದುವೆಯನ್ನು ಅಸಿಂಧುಗೊಳಿಸಲು ಅಧಿಕೃತ ದಾಖಲೆಗಳನ್ನು ಬದಲಾಯಿಸಲಾಗಿದೆ ಎಂದು ಮೊನಾಲಿಸಾ ಆರೋಪಿಸಿದ್ದರು. ಇತ್ತ ಮಧ್ಯಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಮೊನಾಲಿಸಾ ಅವರ ಈ ಆರೋಪವನ್ನು ವಿರೋಧಿಸಿದ್ದರು. ವರ ಮುಸ್ಲಿಂ ಆಗಿರುವುದರಿಂದ ಹಿಂದೂ ಸಂಪ್ರಾದಾಯದ ಪ್ರಕಾರ ಮದುವೆ ನಡೆದಿರುವುದರಿಂದ ಇದು ಕಾನೂನು ಬದ್ಧವಲ್ಲ ಎಂದು ಅವರು ವಾದಿಸಿದ್ದರು.

ಯುವತಿಯ ನಿಜವಾದ ಜನ್ಮ ದಿನಾಂಕ ಡಿಸೆಂಬರ್ 2009 ಆಗಿದ್ದು, ಮದುವೆಯಾಗುವಾಗ ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು. ಹಾಗಾಗಿ ಇಲ್ಲಿ ಮಕ್ಕಳ ರಕ್ಷಣಾ ಕಾಯ್ದೆ ಅನ್ವಯವಾಗುತ್ತದೆ ಎಂದು ಸರ್ಕಾರ ಹೇಳಿದೆ. ಜನನ ಮತ್ತು ವಿವಾಹ ಪ್ರಮಾಣಪತ್ರ ಪಡೆಯಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಲಾಗಿದೆ. ಆರೋಪಿ ಖಾನ್ ವಿರುದ್ಧದ ಅಪಹರಣ ಪ್ರಕರಣದಲ್ಲಿ ನಕಲಿ ದಾಖಲೆ ಬಳಸಲಾಗಿದೆ ಎಂದು ಕೋರ್ಟ್‌ಗೆ ಮಧ್ಯಪ್ರದೇಶ ಸರ್ಕಾರ ತಿಳಿಸಿತ್ತು.
ಸರ್ಕಾರದ ಈ ವಾದಗಳನ್ನು ಪ್ರಶ್ನಿಸಿದ ನ್ಯಾಯಾಲಯವು, ಮೊನಾಲಿಸಾ ತನ್ನ ಪತಿಯ ವಿರುದ್ಧ ಯಾವುದೇ ದೂರು ನೀಡಿಲ್ಲ. ಇದರಲ್ಲಿ ಸರ್ಕಾರದ ವಾದದ ಅಗತ್ಯತೆಯನ್ನು ಪ್ರಶ್ನಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ ಎಂದು ಕೇರಳ ಹೈಕೋರ್ಟ್ ಇಂದು ತೀರ್ಪು ಪ್ರಕಟ ಮಾಡಿದೆ.
