ಕೋಲ್ಕತ್ತಾ: ಸಿಎಂ ಸುವೇಂಧು ಅಧಿಕಾರಿ ನೇತೃತ್ವದ ಬಂಗಾಳ ಸರ್ಕಾರ ಭಾರತೀಯ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಅವರಿಗೆ ನೀಡಿದ್ದ ಭದ್ರತೆಯನ್ನು ಕಡಿತಗೊಳಿಸಿದೆ.
ಮೂಲಗಳ ಪ್ರಕಾರ, ಗಂಗೂಲಿ ಅವರಿಗೆ ನೀಡಿದ್ದ ಭದ್ರತೆಯನ್ನ `Zʼ ಶ್ರೇಣಿಯಿಂದ ʻY’ ಶ್ರೇಣಿಗೆ ಇಳಿಸಿದೆ. ಸಮಗ್ರ ಭದ್ರತಾ ಮರುಮೌಲ್ಯಮಾಪನದ ನಂತರ ರಾಜ್ಯದ ಭದ್ರತಾ ವಿಭಾಗ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಗಂಗೂಲಿ ಅವರ ಭದ್ರತೆಯನ್ನು 2023ರಲ್ಲಿ `Y’ ಶ್ರೇಣಿಯಿಂದ Z ಕೆಟಗರಿಗೆ ಏರಿಸಲಾಗಿತ್ತು.
ಈ ಹಿಂದೆ ʻY’ ಶ್ರೇಣಿ ಭದ್ರತಾ ಅಡಿಯಲ್ಲಿ ಗಂಗೂಲಿ ಅವರಿಗೆ ವಿಶೇಷ ದಳದ ಮೂವರು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಅವರ ಬೆಹಾಲಾ ನಿವಾಸದ ಭದ್ರತಾ ದೃಷ್ಟಿಯಿಂದ 3 ಜನ ವಿಶೇಷ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ಬಳಿಕ ಝೆಡ್ ಶ್ರೇಣಿ ಭದ್ರತಾ ವ್ಯವಸ್ಥೆಯಲ್ಲಿ 8 ರಿಂದ 10 ಪೊಲೀಸ್ ಸಿಬ್ಬಂದಿಯನ್ನ ನೇಮಕ ಮಾಡಲಾಗಿತ್ತು. ಇದೀಗ ಈ ಭದ್ರತಾ ವ್ಯವಸ್ಥೆಯನ್ನ ವಾಪಾಸ್ ಪಡೆಯಲಾಗಿದ್ದು, ವೈ ಕೆಟಗರಿಗೆ ಇಳಿಸಲಾಗಿದೆ.

ಭದ್ರತೆ ಕಡಿತಗೊಳಿಸಲು ಕಾರಣವೇನು?
ವರದಿಗಳ ಪ್ರಕಾರ, ಗಂಗೂಲಿ ಅವರಿಗೆ ಇನ್ಮುಂದೆ ಅತ್ಯುನ್ನತ ಮಟ್ಟದ ಝೆಡ್ ಕೆಟಗರಿಯ ಭದ್ರತೆ ಅಗತ್ಯವಿಲ್ಲ ಎಂದು ಭದ್ರತಾ ಮಂಡಳಿ ತೀರ್ಮಾನಿಸಿದೆ. ಭದ್ರತೆ ಕಡಿತಗೊಂಡ ಹೊರತಾಗಿಯೂ, ಗಂಗೂಲಿ ಅವರಿಗೆ ಅಗತ್ಯವಿರುವ ಸಾಮಾನ್ಯ ಪೊಲೀಸ್ ರಕ್ಷಣೆಯನ್ನ ರಾಜ್ಯ ಸರ್ಕಾರ ಮುಂದುವರಿಸಲಿದೆ.
ಪಶ್ಚಿಮ ಬಂಗಾಳ ಸರ್ಕಾರ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಮಾತ್ರ ಕಡಿತಗೊಳಿಸಿಲ್ಲ. ಬದಲಾಗಿ ರಾಜ್ಯಾದಾದ್ಯಂತ ವಿಐಪಿ ಭದ್ರತಾ ಪ್ರೋಟೋಕಾಲ್ ಪುನಾರಚನೆಯ ಭಾಗವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವ್ಯಕ್ತಿಯ ಸಕ್ರಿಯ ಸಾಂವಿಧಾನಿಕ ಪಾತ್ರ, ಅಧಿಕೃತ ಸ್ಥಿತಿ ಮತ್ತು ನವೀಕರಿಸಿದ ಬೆದರಿಕೆ ಮೌಲ್ಯಮಾಪನದೊಂದಿಗೆ ರಕ್ಷಣಾತ್ಮಕ ನಿಯೋಜನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಇದರ ಮುಖ್ಯ ಉದ್ದೇಶ ಎನ್ನಲಾಗಿದೆ.
`Z’ ಕೆಟಗರಿ ಭದ್ರತೆ ಹೇಗಿರುತ್ತೆ?
`Z’ ಕೆಟಗರಿ ಭದ್ರತೆಯನ್ನ ಭಾರತದಲ್ಲಿ ಗಣ್ಯ ವ್ಯಕ್ತಿಗಳಿಗೆ ಒದಗಿಸಲಾಗುವ ಅತ್ಯುನ್ನತ ಮಟ್ಟದ ಭದ್ರತೆಗಳಲ್ಲಿ 3ನೇ ಅತಿ ದೊಡ್ಡ ಭದ್ರತಾ ಹಂತವಾಗಿದೆ. ದೇಶದ ಪ್ರಮುಖ ವ್ಯಕ್ತಿಗಳು ಮತ್ತು ಗಂಭೀರ ಜೀವ ಬೆದರಿಕೆ ಇರುವವರಿಗೆ ನೀಡಲಾಗುತ್ತದೆ. ಈ ಭದ್ರತಾ ಕೆಟಗರಿಯಲ್ಲಿ 22 ಸಿಬ್ಬಂದಿ ನಿಯೋಜನೆ ಮಾಡಲಾಗಿರುತ್ತದೆ. 4 ರಿಂದ 5 ಜನ ಅತ್ಯಾಧುನಿಕ ತರಬೇತಿ ಪಡೆದ ಕಮಾಂಡೋಗಳು ತಂಡದಲ್ಲಿರುತ್ತಾರೆ. ಭದ್ರತೆ ಪಡೆದ ವ್ಯಕ್ತಿಗೆ 1 ಎಸ್ಕಾರ್ಟ್ ವಾಹನ ನೀಡಲಾಗಿರುತ್ತದೆ.
`Y’ ಕೆಟಗರಿ ಭದ್ರತೆ ಹೇಗಿರುತ್ತೆ?
ಭಾರತದಲ್ಲಿ `Y’ ಕೆಟಗರಿ ಭದ್ರತೆ ಎಂಬುದು ವಿವಿಐಪಿಗಳು, ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ ಅವರ ಜೀವ ಬೆದರಿಕೆಯ ಆಧಾರದ ಮೇಲೆ ಸರ್ಕಾರ ಒದಗಿಸುವ 4ನೇ ಹಂತದ ಭದ್ರತೆಯಾಗಿದೆ. ಈ ಕೆಟಗರಿಯಲ್ಲಿ ಒಟ್ಟು 11 ಜನ ಸುರಕ್ಷತಾ ಸಿಬ್ಬಂದಿ ಇರುತ್ತಾರೆ. ಇದರಲ್ಲಿ ಒಬ್ಬರು ಮತ್ತು ಇಬ್ಬರು ಕಮಾಂಡೋ ಹಾಗೂ ಉಳಿದಂತೆ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿರುತ್ತದೆ. ಇನ್ನೂ 24 ಗಂಟೆಗಳ ಕಾಲ ಅವರಿಗೆ ರಕ್ಷಣೆ ನೀಡಲು ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಜೊತೆಗಿರುತ್ತಾರೆ. ಇದರ ಜೊತೆಗೆ 1 ಅಥವಾ 2 ಭದ್ರತಾ ವಾಹನಗಳನ್ನ ಒದಗಿಸಲಾಗುತ್ತದೆ.
