ಮುಂಬೈ: ನಟ ರಣವೀರ್ ಸಿಂಗ್ (Ranveer Singh) ವಿರುದ್ಧ ಜಾರಿಗೊಳಿಸಲಾಗಿದ್ದ ಅಸಹಕಾರ ಸೂಚನೆಯನ್ನು ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಎಫ್‌ಡಬ್ಲುಐಸಿಇ (FWICE) ಹಿಂಪಡೆದಿದೆ.
‘ಡಾನ್ 3’ ಸಿನಿಮಾದಿಂದ ರಣವೀರ್ ಸಿಂಗ್ ಹೊರಬಂದಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಎಫ್‌ಡಬ್ಲುಐಸಿಇ ಅಸಹಕಾರ ಸೂಚನೆ ಹೊರಡಿಸಿತ್ತು. ಆದರೆ ಇದೀಗ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (ಐಎಮ್‌ಪಿಪಿಎ), ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಹಾಗೂ ಸಿನಿ ಅಂಡ್ ಟಿವಿ ಆರ್ಟಿಸ್ಟ್ ಅಸೋಸಿಯೇಷನ್ (ಸಿಐಎನ್‌ಟಿಟಿಎ) ಮಧ್ಯಸ್ಥಿಕೆಯ ಬಳಿಕ ಈ ನಿರ್ಧಾರವನ್ನು ಹಿಂಪಡೆಯಲಾಗಿದೆ. ಇದನ್ನೂ ಓದಿ: ರಣವೀರ್ ಸಿಂಗ್ 3 ವರ್ಷ ಬ್ಯಾನ್ ಆಗಿಲ್ಲ: FWICE ಸ್ಪಷ್ಟನೆ
ಈ ಬಗ್ಗೆ ಮಾತನಾಡಿದ ಎಫ್‌ಡಬ್ಲುಐಸಿಇ ಅಧ್ಯಕ್ಷ ಬಿ.ಎನ್. ತಿವಾರಿ, ಈ ವಿಚಾರದಲ್ಲಿ ಯಾರೂ ಗೆದ್ದಿಲ್ಲ, ಯಾರೂ ಸೋತಿಲ್ಲ. ನಿರ್ಮಾಪಕರು, ನಿರ್ದೇಶಕರು ಮತ್ತು ನಟರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲರೂ ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಕೆಲವೇ ಗಂಟೆಗಳ ಮೊದಲು ರಣವೀರ್ ಸಿಂಗ್ ಎಫ್‌ಡಬ್ಲುಐಸಿಇ ವಿರುದ್ಧ ಕಾನೂನು ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್‌ನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.ಇದನ್ನೂ ಓದಿ: ಉಪೇಂದ್ರ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ – ಅಣ್ಣನ ಮಗ ನಿರಂಜನ್ ಎಂಗೇಜ್ಮೆಂಟ್
ಡಾನ್ 3 ಸಿನಿಮಾದಿಂದ ರಣವೀರ್ ಹೊರಬಂದ ವಿಚಾರ ಬಾಲಿವುಡ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾ ತಂಡದೊಂದಿಗಿನ ಭಿನ್ನಾಭಿಪ್ರಾಯ, ಚಿತ್ರೀಕರಣದ ವಿಳಂಬ ಹಾಗೂ ಅಂತಿಮ ಕಥೆ ಸಿದ್ಧವಾಗದಿರುವುದು ಇದಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ.
ಇದಕ್ಕೂ ಮೊದಲು ನಿರ್ಮಾಪಕ ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ರಣವೀರ್ ವಿರುದ್ಧ 45 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ ಎಂಬ ಸುದ್ದಿಗಳೂ ಹರಿದಾಡಿದ್ದವು. ವಿವಾದದ ನಡುವೆ ರಣವೀರ್ ಸಿಂಗ್ ಮೌನ ವಹಿಸಿದ್ದರು. ವೃತ್ತಿಪರ ವಿಷಯಗಳನ್ನು ಗೌರವ ಮತ್ತು ಪ್ರೌಢತೆಯಿಂದ ನಿರ್ವಹಿಸುವುದು ಉತ್ತಮ ಎಂಬ ನಿಲುವು ಅವರದ್ದಾಗಿದೆ ಎಂದು ಅವರ ವಕ್ತಾರ ಹೇಳಿಕೆ ನೀಡಿದ್ದರು.ಇದನ್ನೂ ಓದಿ: ಸ್ಥಾನಮಾನ ಹೆಚ್ಚಾದಂತೆ ವಿರೋಧಿಗಳೂ ಹೆಚ್ಚಾಗುತ್ತಾರೆ – ಡಾನ್ 3 ವಿವಾದದಲ್ಲಿ ರಣವೀರ್‌ಗೆ ಕಂಗನಾ ಬೆಂಬಲ
