ಬೆಂಗಳೂರು: ಬಿಟ್ ಕಾಯಿನ್ ಬಹುಕೋಟಿ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ (Mohammed Nalapad)ಗೆ ಮತ್ತೆ ಶಾಕ್ ಎದುರಾಗಿದೆ. ಸೋಮವಾರ (ಜೂ.1) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ (ED) ಸಮನ್ಸ್ ನೀಡಿದೆ.

ನಲಪಾಡ್ ವಿಚಾರಣೆಗೆ ಹಾಜರಾಗುವಂತೆ ಕಳೆದ ಶುಕ್ರವಾರವೇ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಆದ್ರೆ ಪ್ರಸ್ತುತ ರಾಜಕೀಯ ಬೆಳವಣಿಗೆಯಿಂದಾಗಿ ವಿನಾಯ್ತಿ ನೀಡಿತ್ತು. ಇದೀಗ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ. ಬಿಟ್ ಕಾಯಿನ್ ಬಹುಕೋಟಿ ಹಗರಣದಲ್ಲಿ ಮೂವರನ್ನು ಬಂಧಿಸಿರುವ ಇಡಿ ತನಿಖೆ ತೀವ್ರಗೊಳಿಸಿದೆ.

ಸತತ 21 ಗಂಟೆ ಶೋಧ
ಇತ್ತೀಚೆಗಷ್ಟೇ ಬಿಟ್ ಕಾಯಿನ್ ಹಗರಣ (Bit Coin Case) ಪ್ರಕರಣದಲ್ಲಿ ಬೆಂಗಳೂರಿನ ಅಶೋಕನಗರದಲ್ಲಿರುವ ನಲಪಾಡ್ ಮನೆ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಸತತ 21 ಗಂಟೆಗಳ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಹಾರ್ಡ್‌ಡಿಸ್ಕ್, ವಿದೇಶಿ ವ್ಯವಹಾರದ ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು.

ಕೆಲ ವರ್ಷಗಳ ಹಿಂದೆ ಬಿಟ್ ಕಾಯಿನ್ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಈ ಹಗರಣದ ಸೂತ್ರಧಾರ ಎನ್ನಲಾಗಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಬಿಡುಗಡೆ ಮಾಡಿದರು.
