ಅಹಮದಾಬಾದ್: ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಪ್ರಶಸ್ತಿಗಾಗಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಒಂದು ವೇಳೆ ಮಳೆಯಿಂದ (Rain) ಇಂದು ಪಂದ್ಯ ರದ್ದಾದ್ರೆ ಮುಂದೇನು ಅನ್ನೋ ಕುತೂಹಲವು ಅಭಿಮಾನಿಗಳನ್ನ ಕಾಡುತ್ತಿದೆ.
ಅಹಮದಾಬಾದ್‌ನಲ್ಲಿಂದು ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡಚಣೆ ಉಂಟಾದರೆ ಹೆಚ್ಚುವರಿ 2 ಗಂಟೆಗಳನ್ನು ಮೀಸಲು ಸಮಯವಾಗಿ ನಿಗದಿಪಡಿಸಿ ಪಂದ್ಯ ಮುಗಿಸಲು ನಿರ್ಧರಿಸಲಾಗುತ್ತದೆ. ಭಾರೀ ಮಳೆಯಾಗಿ ಪಂದ್ಯವೇ ರದ್ದಾದರೆ ಸೋಮವಾರಕ್ಕೆ ಪಂದ್ಯವನ್ನು ಮುಂದೂಡಲಾಗುತ್ತದೆ.
2023ರಲ್ಲೂ ಅಹಮದಾಬಾದ್‌ನಲ್ಲಿ ಚೆನ್ನೈ vs ಗುಜರಾತ್ ತಂಡಗಳ ನಡುವೆ ನಡೆದಿದ್ದ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗೆ 214 ರನ್ ಗಳಿಸಿತ್ತು. ಆದ್ರೆ ಮಳೆಯಿಂದಾಗಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಗುರಿ ನೀಡಲಾಗಿತ್ತು. ಕೊನೇ 2 ಎಸೆತಗಳಲ್ಲಿ ಜಡೇಜಾ ಸಿಕ್ಸರ್ ಬೌಂಡರಿ ಬಾರಿಸಿ ತಂಡಕ್ಕೆ ಟ್ರೋಫಿ ತಂದುಕೊಡುವಲ್ಲಿ ಯಶಸ್ವಿಯಾದರು.
ಪಿಚ್ ರಿಪೋರ್ಟ್ ಹೇಗಿದೆ?
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಮೊದಲ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿ. ಮೈದಾನ ದೊಡ್ಡದಾಗಿರುವುದರಿಂದ ಭರಪೂರ ಬೌಂಡರಿ, ಸಿಕ್ಸರ್ ಹರಿದು ಬರುವ ಸಾಧ್ಯತೆ ಕಡಿಮೆಯಿದೆ. ಈ ಪಿಚ್‌ನಲ್ಲಿ ಬೌಲರ್‌ಗಳಿಗೆ ರನ್ ನಿಯಂತ್ರಣ ಕಷ್ಟ. ಪ್ರಸ್ತುತ ಟೂರ್ನಿಯಲ್ಲಿ ಈ ಪಿಚ್‌ನ ಸರಾಸರಿ ಮೊದಲ ಇನಿಂಗ್ಸ್ ಮೊತ್ತ 193ಆಗಿದೆ. ಈ ಸೀಸನ್‌ನಲ್ಲಿ ಇಲ್ಲಿ ಒಟ್ಟು 13 ಪಂದ್ಯಗಳಿ ನಡೆದಿದ್ದು, ೮ ಬಾರಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗೆದ್ದಿವೆ. 5 ಬಾರಿ ಚೇಸ್ ಮಾಡಿದ ತಂಡಗಳು ಗೆಲುವಿನ ನಗೆ ಬೀರಿವೆ. ಇಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಕಡಿಮೆ ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆಯೇ ಹೆಚ್ಚು.
