ಅಹಮದಾಬಾದ್: ಕಳೆದ ಎರಡು ತಿಂಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಿದ್ಧಗೊಂಡಿದೆ.
ಪಂದ್ಯ ಎಲ್ಲಿ – ಯಾವಾಗ?
ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
ಸಮಯ: ಸಂಜೆ 7.30
ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸ್ಪೋರ್ಟ್ಸ್
2023: Player 💯
2026: Captain 💯Shubman Gill knows how to take his side into the #Final 🫡#TATAIPL | #Qualifier2 | #TheFinalLeap | #GTvRR | @gujarat_titans | @ShubmanGill pic.twitter.com/rRw38gQTvK
— IndianPremierLeague (@IPL) May 30, 2026
ಮೇ 31ರ ಭಾನುವಾರ (ಇಂದು) ಸಂಜೆ 7:30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಆತಿಥೇಯ ಗುಜರಾತ್ ಟೈಟಾನ್ಸ್ (GT) ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಪ್ರಸಕ್ತ ಸೀಸನ್‌ನ ಟ್ರೆಂಡ್ ಗಮನಿಸಿದರೆ ಇದೊಂದು ಹೈ-ಸ್ಕೋರಿಂಗ್ ಪಂದ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕ್ವಾಲಿಫೈಯರ್ 1ರಲ್ಲಿ ಆರ್‌ಸಿಬಿ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿದರೂ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ಮಣಿಸಿ ಫೈನಲ್ ಗೆ ಜಿಗಿದಿರುವ ಶುಭಮನ್ ಗಿಲ್ ಪಡೆಗೆ ಈ ಬಾರಿ ತವರು ಮೈದಾನದಲ್ಲಿ ಆಡುವ ಲಾಭ ಸಿಗಲಿದೆ. ಇದೇ ಮೈದಾನದಲ್ಲಿ ಆರ್‌ಸಿಬಿ ವಿರುದ್ಧ ಲೀಗ್‌ನಲ್ಲಿ ಜಿಟಿ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಹೀಗಾಗಿ ಟೈಟಾನ್ಸ್ ಅತೀವ ಆತ್ಮವಿಶ್ವಾಸದಲ್ಲಿದೆ. ಆದರೆ ಕಳೆದ 2 ಸೀಸನ್ ಗಳಿಂದ ಪಂದ್ಯದಿಂದ ಪಂದ್ಯಕ್ಕೆ ಬಲಾಢ್ಯವಾಗಿ ಕಾಣಿಸುತ್ತಿರುವ ಆರ್‌ಸಿಬಿ ಬ್ಯಾಕ್-ಟು-ಬ್ಯಾಕ್ ಕಪ್ ಗೆಲ್ಲುವ ತವಕದಲ್ಲಿದೆ. ಇತ್ತಂಡಗಳು ಈವರೆಗೆ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು 5 ಬಾರಿ ಆರ್‌ಸಿಬಿ ಮತ್ತು 4 ಬಾರಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿವೆ.
The perfect road to a grand event 🛣️🏆
A look back at #RCB‘s journey to the #TATAIPL 2026 #Final🔥#TheFinalLeap | #RCBvGT pic.twitter.com/G7EGp4F1jZ
— IndianPremierLeague (@IPL) May 30, 2026
ತಂಡಗಳ ಬಲಾಬಲಗಳನ್ನ ಗಮನಿಸಿದಾಗ ರಾಯಲ್ ಚಾಲೆಂಜರ್ಸ್ ತಂಡವೇ ಹೆಚ್ಚು ಸಮತೋಲಿತವಾಗಿ ತಂಡವಾಗಿ ಕಾಣಿಸುತ್ತಿದೆ. ಫಿಲ್ ಸಾಲ್ಟ್ ಬದಲಿಗೆ ಕಣಕ್ಕಿಳಿದ ಜಾಕೋಬ್ ಬೆಥೆಲ್ ವಿಫಲರಾದಾಗ ಆರ್‌ಸಿಬಿಗೆ ಆರಂಭಿಕನ ಚಿಂತೆ ಬಹಳವಾಗಿ ಕಾಡಿತ್ತು. ಇತ್ತೀಚಿನ ಮೂರು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ವೆಂಕಟೇಶ್ ಅಯ್ಯರ್ ಅವರು ಯಾರೂ ಊಹಿಸದ ರೀತಿಯಲ್ಲಿ ಉತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಏತನ್ಮಧ್ಯೆ ಫಿಲ್ ಸಾಲ್ಟ್ ಅವರು ಗುಣಮುಖರಾಗಿದ್ದಾರೆಂಬ ಸುದ್ದಿಯಿದ್ದರೂ ತಂಡದ ಮ್ಯಾನೇಜ್ ಮೆಂಟ್ ಮಾತ್ರ ಅವರು ಆಡುವ ಸಾಧ್ಯತೆಯ ಬಗ್ಗ ಯಾವುದೇ ಸ್ಪಷ್ಟನೆ ನೀಡಿಲ್ಲ.
ಅದೇನೇ ಇದ್ದರೂ ತಂಡದ ಬ್ಯಾಟಿಂಗ್ ಬಹಳ ಬಲಿಷ್ಠವಾಗಿದ್ದು ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟಿದಾರ್, ಟಿಂ ಡೆೇವಿಡ್, ಕೃನಾಲ್ ಪಾಂಡ್ಯ ಮೊದಲಾದವರು ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಉಳ್ಳವರೇ. ಬೌಲಿಂಗ್ ನಲ್ಲಿ ಭುವನೇಶ್ವರ ಕುಮಾರ್ , ಜೋಶ್ ಹೇಜಲ್ವುಡ್, ರಸಿಕ್ ಸಲಾಂ ತಮ್ಮ ಪಾಲಿನ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಗಿಲ್-ಸುದರ್ಶನ್ ನಿಂತರೇ ಆರ್‌ಸಿಬಿಗೆ ಸಂಕಷ್ಟ
ಗುಜರಾತ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ ಗಳಾದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅವರು ಭರ್ಜರಿ ಫಾರ್ಮ್ ನಲ್ಲಿದ್ದು ಕ್ವಾಲಿಫೈಯರ್ 2 ಪಂದ್ಯದಲ್ಲಿ ಅವರಾಡಿದ ಇನ್ನಿಂಗ್ಸೇ ಇದಕ್ಕೆ ಸಾಕ್ಷಿ. ಜೊತೆಗೆ ಜಾಸ್ ಬಟ್ಲರ್ ಸಹ ಚೆನ್ನಾಗಿ ಆಡುತ್ತಿದ್ದಾರೆ. ಈ ಮೂವರು ವಿಕೆಟ್ ಗಳನ್ನು ಆರ್‌ಸಿಬಿ ತಂಡ ಬೇಗನೇ ಪಡೆಯಬೇಕಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದೆ. ಕೆಂಪುಮಣ್ಣಿನ ಟ್ರ್ಯಾಕ್ ಗಳು ಉತ್ತಮ ವೇಗ ಮತ್ತು ಬೌನ್ಸ್ ನಿಂದ ಕೂಡಿರುವುದು ಬ್ಯಾಟರ್ ಗಳಿಗೆ ತಮ್ಮ ಸ್ಟ್ರೋಕ್ ಗಳನ್ನು ಮುಕ್ತವಾಗಿ ಆಡಲು ಅನುವು ಮಾಡಿಕೊಡಲಿದೆ. ಆದರೆ ಮೈದಾನ ದೊಡ್ಡದಾಗಿರುವುದರಿಂದ ಹೊಡೆದದ್ದೆಲ್ಲಾ ಬೌಂಡರಿ, ಸಿಕ್ಸರ್ ಗಳಾಗುವುದಿಲ್ಲ ಎಂಬ ಎಚ್ಚರಿಯಲ್ಲಿ ಬ್ಯಾಟರ್ ಸಹ ಆಡಬೇಕಾಗುತ್ತೆ. ಸಮತಟ್ಟಾದ ಮೇಲ್ಮೈಯಲ್ಲಿ ಬೌಲರ್‌ಗಳಿಗೆ ರನ್ ನಿಯಂತ್ರಣ ಕಷ್ಟ.
ಸರಿಯಾದ ಜಾಗದಲ್ಲಿ ಚೆಂಡೆಸೆದು ಬ್ಯಾಟರ್ ಲೆಕ್ಕಾಚಾರವನ್ನು ಚಾಣಾಕ್ಷತರಿಂದ ಬುಡಮೇಲು ಮಾಡಿದಲ್ಲಿ ಮಾತ್ರ ಯಶಸ್ಸು ಸಿಗಬಹುದು. ಪ್ರಸಕ್ತ ಸೀಸನ್‌ನಲ್ಲಿ ಇಲ್ಲಿನ ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 193 ರನ್ ಆಗಿದ್ದರೆ, ಒಟ್ಟಾರೆ ಸರಾಸರಿ ಸ್ಕೋರ್ 208 ರನ್ ಆಗಿದೆ. ಪ್ರಸಕ್ತ ವರ್ಷ ನಡೆದ 13 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 8 ಬಾರಿ ಮತ್ತು ಚೇಸಿಂಗ್ ಮಾಡಿದ ತಂಡಗಳು 5 ಬಾರಿ ಜಯಗಳಿಸಿವೆ. ಇಬ್ಬನಿಯ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವೇ ಹೆಚ್ಚು ಎಂದು ಹೇಳಲಾಗುತ್ತಿದೆ.
