ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್ ಕಾಯ್ದುಕೊಂಡ ಕಾರಣ ಐಪಿಎಲ್ ಆಡಳಿತ ಮಂಡಳಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಋತುರಾಜ್ ಗಾಯಕ್ವಾಡ್ಗೆ (Ruturaj Gaikwad) 24 ಲಕ್ಷ ರೂ. ಮತ್ತು ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಉಳಿದೆಲ್ಲಾ ಹನ್ನೊಂದು ಜನ ಆಟಗಾರರಿಗೆ ತಲಾ 6 ಲಕ್ಷ ದಂಡ ವಿಧಿಸಿ ಪ್ರಕಟಣೆ ಹೊರಡಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ವಿರುದ್ಧದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ 89 ರನ್ಗಳ ಅಂತರದಲ್ಲಿ ಸೋಲುವ ಮೂಲಕ 2026ರ ಐಪಿಎಲ್ ಅಭಿಯಾನವನ್ನು ಮುಗಿಸಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಗುಜರಾತ್ ತಂಡ 4 ವಿಕೆಟ್ ನಷ್ಟಕ್ಕೆ 229 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಬಳಿಕ 230 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ತಂಡಕ್ಕೆ ಮೊಹಮ್ಮದ್ ಸಿರಾಜ್ ಅವರು ಸಂಜು ಸ್ಯಾಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು. ಇದನ್ನೂ ಓದಿ: ಗುಜರಾತ್ಗೆ 89 ರನ್ಗಳ ಭರ್ಜರಿ ಜಯ – ಸತತ 3ನೇ ಬಾರಿಗೆ ಪ್ಲೇ ಆಫ್ನಿಂದ ಹೊರಬಿದ್ದ ಚೆನ್ನೈ
ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್ ಸಿಡಿಸಿ ಕಗಿಸೊ ರಬಾಡ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಶಿವಂ ದುಬೆ 17 ಎಸೆತಗಳಲ್ಲಿ 47 ರನ್ಗಳ ಸ್ಫೋಟಕ ಇನ್ನಿಂಗ್ಸ್ ಸಿಡಿಸಿದ್ದು ಬಿಟ್ಟರೆ ಉಳಿದಂತೆ ಎಲ್ಲಾ ಬ್ಯಾಟರ್ಗಳು ಬಹುಬೇಗನೆ ವಿಕೆಟ್ ಒಪ್ಪಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೀಗಾಗಿ, ಸಿಎಸ್ಕೆ ತಂಡ ಅಂತಿಮವಾಗಿ ಜಿಟಿ ವಿರುದ್ಧದ ಹೀನಾಯ ಸೋಲಿನೊಂದಿಗೆ ಈ ಬಾರಿಯ ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಬಿತ್ತು.
ಪ್ರಕಟಣೆಯಲ್ಲಿ ಐಪಿಎಲ್ ಆಡಳಿತ ಮಂಡಳಿ ಹೇಳಿದ್ದೇನು?
2026ರ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಗುಜರಾತ್ ಟೈಟಾನ್ಸ್ ವಿರುದ್ಧದ 66 ನೇ ಪಂದ್ಯದ ವೇಳೆ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಕನಿಷ್ಠ ಓವರ್ ರೇಟ್ ಅಪರಾಧಕ್ಕೆ ಸಂಬಂಧಿಸಿದಂತೆ ಇದು ಅವರ ತಂಡದ ಎರಡನೇ ಅಪರಾಧ (ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 18ನೇ ಪಂದ್ಯದಲ್ಲಿ ಚೆನ್ನೈ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿತ್ತು) ಆಗಿರುವುದರಿಂದ, ಗಾಯಕ್ವಾಡ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್-11 ನ ಉಳಿದ ಸದಸ್ಯರಿಗೆ 6 ಲಕ್ಷ ರೂ. ಅಥವಾ ಅವರ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಇವೆರಡರಲ್ಲಿ ಯಾವುದು ಕಡಿಮೆ ಆಗುತ್ತದೆಯೋ ಅದನ್ನು ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮುಂಬೈ ವಿರುದ್ಧ ಗೆದ್ದ ಕೋಲ್ಕತ್ತಾ – ಚೆನ್ನೈ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣ; 4ನೇ ಸ್ಥಾನಕ್ಕೆ ಹೇಗಿದೆ ಪೈಪೋಟಿ?
ಈ ಋತುವಿನಲ್ಲಿ ಎಂಎಸ್ ಧೋನಿಯವರು ಒಂದೇ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲವಾದ್ದರಿಂದ ಅವರು ಮುಂದಿನ ಅವೃತ್ತಿಯಲ್ಲಿ ಆಡತ್ತಾರೋ? ಇಲ್ಲವೋ? ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಬಾರಿ ಚೆನ್ನೈನ ಹಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಮುಂದಿನ ಸೀಸನ್ಗೆ ಚೆನ್ನೈ ಫ್ರಾಂಚೈಸಿ ಹಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

