ಅಹಮದಾಬಾದ್: ಗುಜರಾತ್ ಟೈಟಾನ್ಸ್ (Gujarat Titans) ತಂಡದ ಆಲ್‌ರೌಂಡ್ ಆಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಧೂಳಿಪಟ ಆಗಿದೆ. 89 ರನ್‌ಗಳ ಬೃಹತ್ ಅಂತರದಿಂದ ಸೋತ ಸಿಎಸ್‌ಕೆ, ಇತಿಹಾಸದಲ್ಲೇ ಫಸ್ಟ್ ಟೈಂ ಸತತ 3ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ.
2024 ರಲ್ಲಿ ಆರ್‌ಸಿಬಿ (RCB) ವಿರುದ್ಧ ನಾಕೌಟ್ ಪಂದ್ಯದಲ್ಲಿ ಸೋತ ಸಿಎಸ್‌ಕೆ, 2025 ರಲ್ಲಿ ಲೀಗ್‌ನಲ್ಲಿ ಕೇವಲ 4 ಪಂದ್ಯ ಗೆದ್ದು ಹೊರಬಿದ್ದಿತ್ತು. ಈ ಬಾರಿ ಸತತ ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಎದುರಿಸಿದ ಸಿಎಸ್‌ಕೆ ಲೀಗ್‌ನಲ್ಲೇ ಹೊರನಡೆದಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಟಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಚಚ್ಚಿದ್ದರು. 229 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಸಿಎಸ್‌ಕೆ 13.4 ಓವರ್‌ಗಳಲ್ಲಿ 140 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಪ್ಲೇ ಆಫ್ ನಿಂದ ಹೊರನಡೆಯಿತು.
4 ರನ್‌ಗಳಿಗೆ 4 ವಿಕೆಟ್
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಮತ್ತೆ ಪುಟಿದೆದ್ದ ಸಿಎಸ್‌ಕೆ ಉತ್ತಮ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆ ಮೂಡಿಸಿತ್ತು. ಆದ್ರೆ ಶಿವಂ ದುಬೆ (Shivam Dube) ಔಟಾಗುತ್ತಿದ್ದಂತೆ ವಿಕೆಟ್‌ಗಳ ಪತನ ಶುರುವಾಯಿತು. ಅದ್ರಲ್ಲೂ ಕಹಿಸೊ ರಬಾಡ ಬೆಂಕಿ ದಾಳಿ, ರಶೀದ್ ಖಾನ್ ಸ್ಪಿನ್ ಮ್ಯಾಜಿಕ್‌ಗೆ ಬಲಿಯಾದ ಸಿಎಸ್‌ಕೆ ಕೊನೆಯಲ್ಲಿ 4 ರನ್‌ಗಳ ಅಂತರದಲ್ಲೇ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿಗೆ ತುತ್ತಾಯಿತು.
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಸಿಎಸ್‌ಕೆ ಒಂದೆಡೆ ರನ್ ಕಲೆಹಾಕುತ್ತಿದ್ದರೂ ಮತ್ತೊಂದು ಕಡೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಸಂಜು ಸ್ಯಾಮ್ಸನ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಂತೆ ಋತುರಾಜ್ ಹಾಗೂ ಮ್ಯಾಥ್ಯೂ ಶಾರ್ಟ್ ಪವರ್ ಪ್ಲೇ ನಲ್ಲಿ ಅಬ್ಬರಿಸಲು ಶುರು ಮಾಡಿದ್ರು. ಆದ್ರೆ 7 ಎಸೆತಗಳಲ್ಲಿ 16 ರನ್ ಗಳಿಸಿದ್ದ ಋತುರಾಜ್, 14 ಎಸೆತಗಳಲ್ಲಿ 24 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಪವರ್ ಪ್ಲೇ ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಅಗ್ರ ಬ್ಯಾಟರ್ ಉರ್ವಿಲ್ ಪಟೇಲ್ ಕೂಡ ಎರಡೇ ಎಸೆತಕ್ಕೆ ಕ್ಯಾಚ್ ನೀಡಿ ಔಟಾದರು. ಇದು ದೊಡ್ಡ ಮೊತ್ತದ ಗುರಿ ಬೆನ್ನತ್ತಿದ ಸಿಎಸ್‌ಕೆಗೆ ದೊಡ್ಡ ಹಿನ್ನಡೆಯಾಯಿತು.

ದುಬ್ಬಿಸಿದ ದುಬೆ, ಕಾಂಬೋಜ್
63 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಂ ದುಬೆ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಗುಜರಾತ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದ ದುಬೆ, 16 ಎಸೆತಗಳಲ್ಲಿ 47 ರನ್ ಚಚ್ಚಿದ್ದರು. 12 ಓವರ್‌ಗಳಲ್ಲಿ 136 ರನ್ ಗಳಿಸಿದ್ದ ಸಿಎಸ್‌ಕೆ ವಿಕೆಟ್ ಕಳೆದುಕೊಂಡ ಹೊರತಾಗಿಯೂ ಪಂದ್ಯವನ್ನು ಹಿಡಿತದಲ್ಲಿಟ್ಟುಕೊಂಡಿತ್ತು.
ಶಿವಂ ದುಬೆ ಔಟಾಗುತ್ತಿದ್ದಂತೆ ವಿಕೆಟ್ ಪತನ ಶುರುವಾಯಿತು. ಕೊನೆಯಲ್ಲಿ 4 ರನ್‌ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಂಡಿತು. ಇನ್ನುಳಿದಂತೆ ಸಿಎಸ್‌ಕೆ ಪರ ಅನ್ಶುಲ್ ಕಾಂಬೋಜ್ 19 ರನ್, ಡೆವಾಲ್ಡ್ ಬ್ರೆವೀಸ್ 8 ರನ್, ನೂರ್ ಅಹ್ಮದ್ 1, ಮುಕೇಶ್ ಚೌಧರಿ 2 ರನ್ ಗಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಸಾಯಿ ಸುದರ್ಶನ್, ನಾಯಕ ಶುಭಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಬೊಂಬಾಟ್ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಜಿಟಿ 4 ವಿಕೆಟ್ ನಷ್ಟಕ್ಕೆ 229 ರನ್ ಪೇರಿಸಿತ್ತು.

ಶತಕದ ಆರಂಭ, ಅಬ್ಬರಿಸಿದ ಬಟ್ಲರ್
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್‌ಗಳಲ್ಲಿ 125 ರನ್‌ಗಳ ಕಲೆಹಾಕಿತು. ಆರಂಭದಿಂದಲೂ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳ ಸಹಿತ 64 ರನ್‌ಗಳಿಸಿ ಸ್ಪೆನ್ಸರ್ ಜಾನ್ಸನ್ ಬೌಲಿಂಗ್ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಜೋಸ್ ಬಟ್ಲರ್ 2ನೇ ವಿಕೆಟ್ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 82 ರನ್ ಜೊತೆಯಾಟ ನೀಡಿತು. ಆರಂಭದಲ್ಲಿ ಪರದಾಡಿದ ಸುದರ್ಶನ್ ನಂತರ ರಿದಮ್ ಕಂಡುಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಟ್ಟಾರೆ 53 ಎಸೆತ ಎದುರಿಸಿದ ಸುದರ್ಶನ್ 7 ಬೌಂಡರಿ, 4 ಸಿಕ್ಸರ್‌ಗಳ ಸಹಿತ 84 ರನ್‌ಗಳಿಸಿ ಕಾಂಬೋಜ್ ಬೌಲಿಂಗ್ನಲ್ಲಿ ಮ್ಯಾಥ್ಯೂ ಶಾರ್ಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ ಅಜೇಯ 57 ರನ್‌ಗಳಿಸಿ ಮಿಂಚಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಅಜೇಯ 7 ರನ್‌ಗಳಿಸಿದರು.
ಸಿಎಸ್‌ಕೆ ಪರ ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಹಾಗೂ ಸ್ಪೆನ್ಸರ್ ಜಾನ್ಸನ್ ತಲಾ 1 ವಿಕೆಟ್ ಪಡೆದರು.

