– ಹುಂಡಿ ಹಣ ಕಳ್ಳತನಕ್ಕೆ ಕೀ, ನಕಲಿ ರಶೀದಿ, ಬ್ಯಾಂಕ್ ಖಾತೆಗಳ ಜಾಲ
– ಕದ್ದ ಹಣ ಮರೆಮಾಚಲು ಸಂಬಂಧಿಕರ ಖಾತೆ ಬಳಕೆ
ಅಯೋಧ್ಯೆ: ದೇಶದ ಅತ್ಯಂತ ಭದ್ರತೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯ (Ram Mandir) ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ (Donation Theft) ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಎಂಟು ಆರೋಪಿಗಳ ಪೈಕಿ ನಾಲ್ವರ ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಕದ್ದ ಹಣವನ್ನು ಮರೆಮಾಚಲು ಮಾಡಿದ್ದ ಪ್ಲ್ಯಾನ್ ಕೂಡ ತನಿಖೆಯಲ್ಲಿ ಬಯಲಾಗಿದೆ.
ಕೋರ್ಟ್ ಅನುಮತಿ ಮೇರೆಗೆ ಜೈಲಿನಲ್ಲೇ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ ಮಿಶ್ರಾ ಮತ್ತು ಕರುಣೇಶ್ ಪಾಂಡೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮೊದಲು ಆರೋಪಿ ಅವಿನಾಶ್ ಶುಕ್ಲಾ ಕೂಡ ತಪ್ಪೊಪ್ಪಿಕೊಂಡಿದ್ದ. ವಿಚಾರಣೆ ವೇಳೆ ನಾಲ್ವರೂ ಸೇರಿ ಹುಂಡಿ ಹಣ ಕಳ್ಳತನದ ಸಂಪೂರ್ಣ ಮಾಹಿತಿ ನೀಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಟಿನ್ನು ಯಾದವ್ ಮತ್ತು ಮೇಲ್ವಿಚಾರಣೆಯಲ್ಲಿದ್ದ ಸುಭಾಷ್ ಶ್ರೀವಾಸ್ತವ್ ಸಹಕಾರದಿಂದ ಕಳ್ಳತನ ನಡೆಯುತ್ತಿತ್ತು. ಟಿನ್ನು ಯಾದವ್ ಬಳಿ ಹುಂಡಿ ಎಣಿಕೆ ಕೇಂದ್ರದ ಕೀ ಇದ್ದ ಕಾರಣ ಹಣ ಕಳವು ಮಾಡುವುದು ಸುಲಭವಾಗುತ್ತಿತ್ತು ಎನ್ನಲಾಗಿದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದ ಹಣ ಕದ್ದಿದ್ದ ಆರೋಪಿಗಳು, ನಂತರ ಕೋಟಿ ಕೋಟಿ ರೂಪಾಯಿ ಹಣ ಎಗರಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.ಇದನ್ನೂ ಓದಿ: 3 ವರ್ಷದ ಪ್ರೀತಿ ಬಿಟ್ಟು ಬೇರೆ ಮದ್ವೆಗೆ ಒಪ್ಪಿಗೆ – ಪ್ರೇಯಸಿಗೆ ಚಾಕು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ
ಕದ್ದ ಹಣದ ಮೂಲ ಪತ್ತೆಯಾಗದಂತೆ ಮಾಡಲು ಆರೋಪಿಗಳು ಬೇರೆ ಪ್ಲ್ಯಾನ್ ಮಾಡಿದ್ದರು. ಹಣವನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೀಡಿ, ಬಳಿಕ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುತ್ತಿದ್ದರು. ಹಣದ ಮೂಲವನ್ನು ಮರೆಮಾಚಲು ಈ ವ್ಯವಸ್ಥಿತ ಸಂಚು ರೂಪಿಸಲಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇದಷ್ಟೇ ಅಲ್ಲ, ತನಿಖೆ ವೇಳೆ ಮತ್ತೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ದೇಣಿಗೆ ನೀಡಲು ಬಂದ ಭಕ್ತರಿಗೆ ನಕಲಿ ರಶೀದಿಗಳನ್ನು ನೀಡಿ ಅಲ್ಲಿಂದಲೂ ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ನಕಲಿ ರಶೀದಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು ಆರೋಪಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರ ಸುಮಾರು 30 ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿನ ಹಣದ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದ್ದು, ಆದಾಯಕ್ಕಿಂತ ಹೆಚ್ಚು ಮೊತ್ತದ ವ್ಯವಹಾರಗಳು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಈ ಮಧ್ಯೆ, ಪ್ರಕರಣದ ಪ್ರಮುಖ ಆರೋಪಿ ಅವಿನಾಶ್ ಮಿಶ್ರಾ ವೈಯಕ್ತಿಕ ಬದುಕಿನ ಮೇಲೂ ಈ ಪ್ರಕರಣ ಪರಿಣಾಮ ಬೀರಿದೆ. ಕದ್ದ ಹಣದಲ್ಲಿ ತನ್ನ ನಿಶ್ಚಿತಾರ್ಥದ ಯುವತಿಗೆ ಐಫೋನ್ ಉಡುಗೊರೆಯಾಗಿ ನೀಡಿದ್ದ ಹಾಗೂ ಆಕೆಯ ಖಾತೆಗೆ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿದೆ. ಈ ವಿಚಾರದ ಬಳಿಕ ಯುವತಿಯ ಕುಟುಂಬ ಮದುವೆಯನ್ನು ರದ್ದುಪಡಿಸಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಡಿಕೆಶಿಗೆ ಧರ್ಮ, ಸಂಸ್ಕೃತಿ ಬಗ್ಗೆ ಅರಿವಿದೆ – ಮಠದ ಅಭಿವೃದ್ಧಿಗೆ ಸಿಎಂ ಬಳಿ ಅನುದಾನ ಕೇಳಿದ ರಂಭಾಪುರಿ ಶ್ರೀ
