ಚೆನ್ನೈ: ಬುಧವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಸರ್ಸ್ ತಂಡ ಗೆಲುವು ಸಾಧಿಸಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಆರಂಭದಲ್ಲಿ ಸತತ ಸೋಲನುಭವಿಸಿದರೂ ಬಳಿಕ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದ್ದ ಚೆನ್ನೈ ತಂಡ ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಕೆಕೆಆರ್ ತಂಡ ಪಾಯಿಂಟ್ ಪಟ್ಟಿಯಲ್ಲಿ 13 ಅಂಕಗಳೊಂದಿಗೆ ಸಿಎಸ್‌ಕೆ ತಂಡವನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿರುವ ರಾಜಸ್ಥಾನ್ ತಂಡ ಹಾಗೂ 13 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಂಜಾಬ್ ತಂಡಗಳೂ ಕೂಡ ಪ್ಲೇಆಫ್ ಪ್ರವೇಶಿಸಲು ಎದುರು ನೋಡುತ್ತಿವೆ. ಈ ನಡುವೆ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್‌ಕೆ ತಂಡಕ್ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಅವಕಾಶ ತೀರಾ ಕಡಿಮೆಯಿದೆ.
ಸದ್ಯದ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರದ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಪ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿದ್ದು, ಶೇ.50 ರಷ್ಟು ಅವಕಾಶ ಇದೆ. ಇತ್ತ ಪಂಜಾಬ್ ಹಾಗೂ ಕೆಕೆಆರ್ ತಂಡಕ್ಕೆ ಶೇ.19 ರಷ್ಟು ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಅವಕಾಶ ಇದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇ.9 ರಷ್ಟು ಅವಕಾಶ ಇದ್ದರೆ, ಚೆನ್ನೈ ತಂಡಕ್ಕೆ ಕೇವಲ ಶೇ.3 ರಷ್ಟು ಮಾತ್ರ ಅವಕಾಶ ಇದೆ.
ರಾಜಸ್ಥಾನ್ ರಾಯಲ್ಸ್: ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನದಲ್ಲಿರುವ ಆರ್‌ಆರ್ ತಂಡ ಮುಂಬೈ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಬಹುತೇಕ ಪ್ಲೇಆಫ್ ಪ್ರವೇಶಿಸಲಿದೆ. ಒಂದು ವೇಳೆ ಆರ್‌ಆರ್ ಸೋತರೂ ಪ್ಲೇಆಫ್‌ಗೆ ಹೋಗಬೇಕಂದ್ರೆ, ಪಂಜಾಬ್, ಕೆಕೆಆರ್, ಡೆಲ್ಲಿ ಹಾಗೂ ಸಿಎಸ್‌ಕೆ ತಂಡಗಳು ಸಹ ತಮ್ಮ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಡೆಲ್ಲಿ ಹಾಗೂ ಸಿಎಸ್‌ಕೆ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸುವುದು ಕಷ್ಟ. ಯಾಕೆಂದರೆ ಆರ್‌ಆರ್ ತಂಡದ ರನ್ ರೇಟ್ ಈ ಎರಡೂ ತಂಡಗಳಿಗಿಂತ ಉತ್ತಮವಾಗಿದೆ.
ಪಂಜಾಬ್ ಕಿಂಗ್ಸ್: ಶ್ರೇಯಸ್ ಐಯ್ಯರ್ ನೇತೃತ್ವದ ಪಂಜಾಬ್ ಪಡೆ ಪ್ಲೇಆಫ್ ಪ್ರವೇಶಿಸಲು ಎಲ್‌ಎಸ್‌ಜಿ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದರ ಜೊತೆಗೆ ಆರ್‌ಆರ್ ಮತ್ತು ಕೆಕೆಆರ್ ತಮ್ಮ ಕೊನೆಯ ಪಂದ್ಯಗಳಲ್ಲಿ ಸೋಲಬೇಕು. ಆಗ ಮಾತ್ರ ಪಿಬಿಕೆಎಸ್ ತಂಡಕ್ಕೆ ನಾಕೌಟ್ ಪ್ರವೇಶಿಸಲು ಅವಕಾಶ ಇದೆ. ಒಂದು ವೇಳೆ ಆರ್‌ಆರ್ ಗೆದ್ದರೆ, ಪಂಜಾಬ್ ಪ್ಲೇಆಫ್ ರೇಸ್‌ನಿಂದ ಹೊರಬೀಳಲಿದೆ. ಒಂದು ವೇಳೆ ಪಿಬಿಕೆಎಸ್ ಮತ್ತು ಕೆಕೆಆರ್ ತಮ್ಮ ಪಂದ್ಯಗಳನ್ನು ಗೆದ್ದು, ಆರ್‌ಆರ್ ಸೋತರೆ ಟಾಪ್ 4ರ ಸ್ಥಾನಕ್ಕೆ ಯಾರು ಹೋಗಬೇಕೆಂಬುದನ್ನು ಎನ್‌ಆರ್‌ಆರ್ ನಿರ್ಧಾರ ಮಾಡಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಪ್ಲೇಆಫ್ ಪ್ರವೇಶಿಸಲು ತನ್ನ ಕೊನೆಯ ಪಂದ್ಯ ಗೆಲ್ಲಬೇಕು. ಜೊತೆಗೆ ಪಿಬಿಕೆಎಸ್ ಮತ್ತು ಆರ್‌ಆರ್ ತಮ್ಮ ಪಂದ್ಯಗಳಲ್ಲಿ ಸೋಲುವಂತಾಗಬೇಕು.
ಡೆಲ್ಲಿ ಕ್ಯಾಪಿಟಲ್ಸ್: ಪಾಯಿಂಟ್ಸ್ ಟೇಬಲ್‌ನಲ್ಲಿ 8ನೇ ಸ್ಥಾನದಲ್ಲಿರುವ ಡಿಸಿ ತಂಡ ಕೆಕೆಆರ್ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು. ಮೇಲಿರುವ ಆರ್‌ಆರ್, ಪಿಬಿಕೆಎಸ್, ಕೆಕೆಆರ್, ಸಿಎಸ್‌ಕೆ ತಂಡಗಳು ಸೋಲನುಭವಿಸಿದರೆ ಡೆಲ್ಲಿಗೆ ಅವಕಾಶ ಇರಲಿದೆ.
ಚೆನ್ನೈ ಸೂಪರ್ ಕಿಂಗ್ಸ್: 13 ಪಂದ್ಯಗಳನ್ನಾಡಿ 12 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ಸಿಎಸ್‌ಕೆ ತಂಡದ ಪ್ಲೇಆಫ್ ಭವಿಷ್ಯ ಆರ್‌ಆರ್, ಪಿಬಿಕೆಎಸ್ ಹಾಗೂ ಕೆಕೆಆರ್ ತಂಡಗಳ ಕೊನೆಯ ಪಂದ್ಯದ ಫಲಿತಾಂಶದ ಮೇಲೆ ನಿಂತಿದೆ. ಒಂದು ವೇಳೆ ಈ ಮೂರು ತಂಡಗಳು ಸೋತು ಡಿಸಿ ತಂಡ ಗೆದ್ದರೆ ಚೆನ್ನೈ ಹಾಗೂ ಡಿಸಿ ತಂಡಗಳು ಪಾಯಿಂಟ್ಸ್ ಟೇಬಲ್‌ನಲ್ಲಿ 14 ಅಂಕಗಳೊಂದಿಗೆ ಸಮಬಲ ಸಾಧಿಸಲಿವೆ. ಆಗ ಯಾವ ತಂಡದ ರನ್‌ರೇಟ್ ಉತ್ತಮವಾಗಿರುತ್ತದೋ ಆ ತಂಡ ಪ್ಲೇಆಫ್ ಪ್ರವೇಶಿಸಲಿದೆ.

