– ಹೊಣೆ ಮರೆತ್ರಾ ಬೆಂಗಳೂರಿನ ಮೂವರು ಬಿಜೆಪಿ ಸಂಸದರು?
ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ನಾಡಿ ನಮ್ಮ ಮೆಟ್ರೋ (Namma Metro) ಪ್ರಯಾಣ ಮತ್ತಷ್ಟು ದುಬಾರಿಯಾಗಿದೆ. ಪ್ರತಿವರ್ಷ ಫೆಬ್ರುವರಿ ತಿಂಗಳಲ್ಲಿ ಮೆಟ್ರೋ ದರ ಏರಿಕೆ (Metro Ticket Price Hike) ಮಾಡುವುದು ನಿಯಮವಿದೆ ಎಂಬ ನೆಪ ಹೇಳಿ ಬಿಎಂಆರ್‌ಸಿಎಲ್ ದರ ಪರಿಷ್ಕರಣೆ ಮಾಡಿ, ಪ್ರಯಾಣ ದರ ಏರಿಕೆ ಮಾಡುವುದಾಗಿ ತಿಳಿಸಿದೆ. ಈಗಾಗಲೇ 72% 72 ದರ ಏರಿಕೆ ಮಾಡಿರುವ ಬಿಎಂಆರ್‌ಸಿಎಲ್ ಮತ್ತೆ 5% ದರ ಏರಿಕೆ ಮಾಡಿದ್ದು, ಫೆಬ್ರುವರಿ 9ರಿಂದ ನೂತನ ದರ ಜಾರಿಯಾಗಲಿದೆ ಎಂದು ತಿಳಿಸಿದೆ. ಇದು ಮೆಟ್ರೋದಲ್ಲಿ ಸಂಚರಿಸುವವರಿಗೆ ಮತ್ತಷ್ಟು ಹೊರೆಯಾಗಲಿದೆ. ಸಾರ್ವಜನಿಕರ ಪ್ರಯಾಣ ತ್ರಾಸದಾಯಕವಾಗಿದೆ. ಅಲ್ಲದೇ, ಮನಸೋ ಇಚ್ಛೆ ದರ ಏರಿಕೆ ಮಾಡಿ ಪ್ರಯಾಣಿಕರ ಜೊತೆ ನಮ್ಮ ಮೆಟ್ರೋ ಚೆಲ್ಲಾಟವಾಡುತ್ತಿದೆ.
ದರ ವಿಚಾರದಲ್ಲೂ ರಾಜ್ಯ-ಕೇಂದ್ರದ ಸಂಘರ್ಷ
ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲಿಯೂ ಪೊಲಿಟಿಕಲ್ ಫೈಟ್ (Political Fight) ಮುಂದುವರೆದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಜೋರಾಗಿದೆ. ಮೆಟ್ರೋ ಪ್ರಯಾಣದರ ಹೆಚ್ಚಳದಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರ ಎಂದು ಹೇಳುವ ಮೂಲಕ ಬೆಂಗಳೂರಿನ ಮೂವರು ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ ಮೋಹನ್ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ನಡುವೆ ಸಿಲಿಕಾನ್ ಸಿಟಿ ಜನರಂತೂ ಸಿಕ್ಕಾಪಟ್ಟೆ ಹೈರಾಣಾಗಿದ್ದಾರೆ.
`ಕೇಂದ್ರ ಮಾಡಿಲ್ಲ, ಮೆಟ್ರೋ ದರ ಏರಿಕೆಗೆ ರಾಜ್ಯ ರ್ಕಾರ ಕಾರಣ
ಇನ್ನು, ಮೆಟ್ರೋ ದರ ಪರಿಷ್ಕರಣೆ ವಿಚಾರವಾಗಿ ಸಂಸದ ಪಿ.ಸಿ ಮೋಹನ್ ಪಬ್ಲಿಕ್ ಟಿವಿಗೆ ರಿಯಾಕ್ಟ್ ಮಾಡಿದ್ದಾರೆ. ದರ ಏರಿಕೆ ಕೇಂದ್ರ ಸರಕಾರ ಮಾಡಿಲ್ಲ. ರಾಜ್ಯ ಸರ್ಕಾರವೇ ದರ ಏರಿಕೆ ಮಾಡಿರೋದು. ಈ ಸರ್ಕಾರ ದಿವಾಳಿ ಆಗಿದೆ. ಅದರ ಹೊರೆ ರಾಜ್ಯದ ಜನರ ಮೇಲೆ ಹಾಕ್ತಾ ಇದ್ದಾರೆ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಫಂಡಿಂಗ್ ಮಾತ್ರ ಮಾಡೋದು. ದರ ಏರಿಕೆ ಬೋರ್ಡ್‌ನಲ್ಲಿ ರಾಜ್ಯ ಸರ್ಕಾರದ ಪರವೇ ಓಟಿಂಗ್ ಪವರ್ ಜಾಸ್ತಿ ಇದೆ. ನಾವು 3 ಸಂಸದರೇ ಮೆಟ್ರೋ ಯೋಜನೆಗೆ ಅತಿ ಹೆಚ್ಚು ಅನುದಾನ ತಂದಿರುವುದು ಅಂತೇಳಿದ್ರು. ಅಲ್ಲದೇ, ದರ ಏರಿಕೆ ವಿಚಾರವಾಗಿ ಬಿಎಂಆರ್‌ಸಿಎಲ್ ಎಂಡಿ ಚರ್ಚೆಗೆ ಬರಲಿ, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ರು.
ಗ್ಯಾರಂಟಿಗಳ ಮಧ್ಯೆ ಸಿಲುಕಿ ದರ ಏರಿಕೆ; ಜನ ಸಿಡಿಮಿಡಿ
ಇತ್ತ ಪ್ರಯಾಣಿಕರು ಕೂಡ ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ವಿರುದ್ಧ ನಿಗಿನಿಗಿ ಕೆಂಡವಾಗಿದ್ದಾರೆ. ಬೆಂಗಳೂರಿನಲ್ಲಿ ಮೂವರು ಸಂಸದರು ಇದ್ದರೂ ಯಾವ್ದೇ ಪ್ರಯೋಜನೆ ಇಲ್ಲ. ಇತ್ತ ರಾಜ್ಯ ಸರ್ಕಾರ ಗ್ಯಾರಂಟಿಗಳನ್ನ ನೀಡಿ, ಆರ್ಥಿಕ ಸಂಕಷ್ಟದಲ್ಲಿದೆ. ಅದರ ಹೊರೆ ತಗ್ಗಿಸಲು ಪ್ರಯಾಣಿಕರ ಮೇಲೆ ಹಾಕುತ್ತಿದೆ. ಪ್ರಯಾಣಿಕರನ್ನ ದಿನೇ-ದಿನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ವೇತನ ಮಾತ್ರ ಹಂಗೇ ಇದೆ, ಇಲ್ಲಿ ನೋಡಿದ್ರೆ ಸರ್ಕಾರ ತಮಗೆ ಇಷ್ಟ ಬಂದಂತೆ ದರ ಏರಿಕೆ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿರ್ದೇಶಕರ ಮಂಡಳಿಯವರು ವಿರೋಧಿಸಲಿಲ್ವಾ?
ಟಿಕೆಟ್ ದರ ಏರಿಕೆಯಲ್ಲಿ ರಾಜ್ಯದ ಪಾತ್ರ ಇಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳ್ತಿದ್ದಾರೆ. ಆದರೆ ಟಿಕೆಟ್ ದರ ಏರಿಕೆಗೆ ವಿರೋಧ ಏಕೆ ಮಾಡಲಿಲ್ಲ? ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ, ನಿರ್ದೇಶಕರ ಮಂಡಳಿಯಲ್ಲಿ ಒಟ್ಟು 14 ಮಂದಿ ಸದಸ್ಯರಲ್ಲಿ ರಾಜ್ಯದವರೇ ಹೆಚ್ಚು ಇದ್ದಾರೆ. ಐದು ಮಂದಿ ಮಾತ್ರ ಕೇಂದ್ರ ಸರ್ಕಾರದ ಅಧಿಕಾರಿಗಳು ಇದ್ದಾರೆ. ಹೀಗಿರುವಾಗ ನಿರ್ದೇಶಕ ಮಂಡಳಿಯಲ್ಲಿರುವ ರಾಜ್ಯದ ಅಧಿಕಾರಿಗಳು ದರ ಏರಿಕೆ ಬಗ್ಗೆ ಏಕೆ ಒಪ್ಪಿದರು? ನಿರ್ದೇಶಕರ ಮಂಡಳಿ ದರ ಏರಿಕೆ ವರದಿ ಸರ್ಕಾರಕ್ಕೆ ಸಲ್ಲಿಸಿಲ್ಲವಾ? ಅಥವಾ ಸಲ್ಲಿಸಿದ್ರೂ ಕೇಂದ್ರ ಕಡೆ ಬೊಟ್ಟು ಮಾಡ್ತಿದ್ಯಾ ರಾಜ್ಯ ಸರ್ಕಾರ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದ್ಕಡೆ ದರ ಏರಿಕೆಯಲ್ಲಿ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಪಡೆಯಲೇಬೇಕು, ಆಗಲಾದರೂ ರಾಜ್ಯ ಸರ್ಕಾರ ದರ ಏರಿಕೆಗೆ ವಿರೋಧ ಮಾಡಬಹುದಿತ್ತು. ಕೇಂದ್ರದತ್ತಲೇ ಬೊಟ್ಟು ಮಾಡ್ತಿರೋ ಸರ್ಕಾರ ಈಗ ಏನ್ ಹೇಳುತ್ತೇ ಎಂಬುದು ಜನರ ಪ್ರಶ್ನೆಯಾಗಿದೆ.
ದೇಶದಲ್ಲೇ ನಮ್ಮ ಮೆಟ್ರೋ ಬಲು ದುಬಾರಿ – ಎಲ್ಲೆಲ್ಲಿ ಎಷ್ಟಿದೆ?
ಬೆಂಗಳೂರು ಮೆಟ್ರೋ
ಗರಿಷ್ಠ- 90 ರೂ.
(45-50 ಕಿ.ಮೀ)
ದೆಹಲಿ ಮೆಟ್ರೋ
ಗರಿಷ್ಠ- 64 ರೂ.
(70 ಕಿ.ಮೀ)
ಚೆನ್ನೈ ಮೆಟ್ರೋ
ಗರಿಷ್ಠ- 64 ರೂ.
(54 ಕಿ.ಮೀ)
ಹೈದ್ರಾಬಾದ್ ಮೆಟ್ರೋ
ಗರಿಷ್ಠ- 60 ರೂ.
(71 ಕಿ.ಮೀ)
ಮುಂಬೈ ಮೆಟ್ರೋ
ಗರಿಷ್ಠ- 80 ರೂ.
(42 ಕಿ.ಮೀ).



