ಲಂಡನ್: ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ (Banu Mushtaq) ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ (International Booker Prize 2025) ಭಾಜನರಾಗಿದ್ದಾರೆ.
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ (Heart Lamp) ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ.
ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು.
ಮೇ 21ರಂದು ಲಂಡನ್‌ನಲ್ಲಿ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ತಲಾ ಒಂದು ಕೃತಿ ‘ಶಾರ್ಟ್ ಲಿಸ್ಟ್’ನಲ್ಲಿದ್ದವು. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.