Connect with us

Bengaluru City

ಕರುನಾಡಿಗೆ ಈಗ ಬ್ರಿಟನ್ ಕೊರೊನಾ ಭಯ – ಏನಾಗಲಿದೆ 15 ಸೋಂಕಿತರ ಎಸ್-ಜೀನ್ ಟೆಸ್ಟ್?

Published

on

– ಸರ್ಕಾರದ ಮುಂದಿರುವ ಸವಾಲುಗಳೇನು?

ಬೆಂಗಳೂರು: ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಬೆಳಕಿಗೆ ಬಂದ ಹೊಸ ಬಗೆಯ ಕೊರೊನಾ ವೈರಸ್ ಇಡೀ ಜಗತ್ತು ಆತಂಕದ ಮಡುವಿನಲ್ಲಿ ತಳ್ಳಿದೆ. ಈಗಾಗಲೇ ಇಸ್ರೇಲ್, ಉತ್ತರ ಐರ್ಲೆಂಡ್, ಆಸ್ಟ್ರೇಲಿಯಾ, ಇಟಲಿ, ಜಪಾನ್, ಜರ್ಮನಿ, ಸಿಂಗಾಪುರಗೆ ಕಾಲಿಟ್ಟಿರುವ ರೂಪಾಂತರಿ ರಾಕ್ಷಸಿ, ಎಲ್ಲಿ ನಮ್ಮ ದೇಶಕ್ಕೂ ಕಾಲಿಡುತ್ತೋ ಎಂದು ಜನ ಗಢ ಗಢ ನಡುಗಲಾರಂಭಿಸಿದ್ದಾರೆ.

ಈಗಾಗಲೇ ಭಾರತ ಸೇರಿ 40ಕ್ಕೂ ಹೆಚ್ಚು ದೇಶಗಳು ಬ್ರಿಟನ್ ಜೊತೆ ವೈಮಾನಿಕ ಸಂಪರ್ಕ ಕಡಿದುಕೊಂಡಿದೆ. ಈ ಸಾಲಿಗೆ ಈಗ ಬ್ರೆಜಿಲ್, ಚೀನಾ ದೇಶಗಳು ಕೂಡ ಸೇರಿವೆ. ಆದರೆ ಬ್ರಿಟನ್ ಜೊತೆ ಸಂಪರ್ಕ ಕಡಿತಕ್ಕೆ ಮುನ್ನವೇ ತಮ್ಮ ದೇಶಗಳಿಗೆ ಬಂದಿರುವವರ ಮೇಲೆ ಎಲ್ಲಾ ದೇಶಗಳು ತೀವ್ರ ನಿಗಾ ಇರಿಸಿವೆ. ಭಾರತದಲ್ಲಿ ಇದುವರೆಗೆ 70ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದರಲ್ಲಿ ಸಿಂಹಪಾಲು ಕರ್ನಾಟಕದ್ದು ಎನ್ನುವುದು ಆತಂಕದ ವಿಚಾರ.

ಇಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಒಬ್ಬರಿಗೆ, ಚಿಕ್ಕಮಗಳೂರಿನ ಇಬ್ಬರಿಗೆ ಸೋಂಕು ತಗುಲಿದೆ. ಇದ್ರೊಂದಿಗೆ ಬ್ರಿಟನ್‍ನಿಂದ ಬಂದವರ ಪೈಕಿ ಸೊಂಕಿಗೆ ತುತ್ತಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇವರಿಗೆ ಬಂದಿರುವುದು ಹಳೆ ವೈರಸ್ಸಾ ಅಥವಾ ಹೊಸ ಬಗೆಯ ವೈರಸ್ಸಾ ಎನ್ನುವುದು ಮಾತ್ರ ಇನ್ನೂ ಖಚಿತವಾಗಿಲ್ಲ. ಪರೀಕ್ಷೆಗಳು ಮುಂದುವರೆದಿವೆ. ಇನ್ನು ಬ್ರಿಟನ್ ವೈರಸ್‍ಗಿಂತಲೂ ಸೌತ್ ಆಫ್ರಿಕಾದ ವೈರಸ್ ಭಯಾನಕ ಅಂತ ಆರೋಗ್ಯ ಸಚಿವ ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣದಲ್ಲಿ ಲಂಡನ್‍ನಿಂದ ಬಂದ 16 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 8, ಶಿವಮೊಗ್ಗ 5, ಚಿಕ್ಕಮಗಳೂರಿನ ಇಬ್ಬರಿಗೆ ಕೊರೊನಾ ತಗುಲಿದೆ. ಬ್ರಿಟನ್‍ನಿಂದ ಹಿಂದಿರುಗಿರುವವರನ್ನು ಪತ್ತೆ ಹಚ್ಚಿಯೇ ನಾಲ್ಕೈದು ದಿನ ಕಳೆದಿದೆ. ಈವರೆಗೂ ಎಸ್-ಜೀನ್ ಟೆಸ್ಟ್ ರಿಸಲ್ಟ್ ಬಂದಿಲ್ಲ.

ಎಸ್-ಜೀನ್ ಟೆಸ್ಟ್ ವಿಳಂಬ ಏಕೆ?: ಸ್ಪೈಕ್ ಜೀನ್ ಸೀಕ್ವೇನ್ಸ್ ಟೆಸ್ಟ್ ಗೆ ಕನಿಷ್ಠ 48 ಗಂಟೆ ಬೇಕು. ಬೆಂಗಳೂರಿನ ನಾಲ್ಕು ಕಡೆ ಟೆಸ್ಟ್ ವ್ಯವಸ್ಥೆ ಇದೆ ಎಂದು ಡಾ.ಸುಧಾಕರ್ ಹೇಳಿದ್ದರು. ಆದ್ರೆ ಬೆಂಗಳೂರಿನ ಎರಡು ಕಡೆ ಮಾತ್ರ ಈ ಸೌಲಭ್ಯವಿದೆ. ಲಭ್ಯವಿರುವ ಎರಡು ಲ್ಯಾಬ್‍ಗಳು ಎಸ್-ಜೀನ್ ಟೆಸ್ಟ್ ಗೆ ಸಜ್ಜಾಗಿರಲಿಲ್ಲ. ಸ್ಯಾಂಪಲ್ ಸಂಗ್ರಹದಲ್ಲೂ ವಿಳಂಬವಾಗಿದೆ. ನಿಮ್ಹಾನ್ಸ್ ವೈದ್ಯರು ರಿಪೋರ್ಟ್ ಗೆ 4 ದಿನ ಆಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಜೆನೆಟಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಬ್ರಿಟನ್ ಕೊರೊನಾ ವೈರಸ್ ಇರೋದು ಖಚಿತವಾದ್ರೇ ಬಿಎಸ್‍ವೈ ಸರ್ಕಾರದ ಮುಂದೆ ಮತ್ತೊಂದು ದೊಡ್ಡ ಸವಾಲು ಎದುರಾಗಲಿದೆ.

ಸರ್ಕಾರಕ್ಕೆ ‘ಬ್ರಿಟನ್’ ಚಾಲೆಂಜ್”: ಬ್ರಿಟನ್ ವೈರಸ್ ಖಚಿತವಾದಲ್ಲಿ ಮತ್ತೆ 12 ಪ್ರಬೇಧ ವೈರಸ್ ಪತ್ತೆ ಪರೀಕ್ಷೆ ನಡೆಯಬೇಕು. ಬ್ರಿಟನ್‍ನಿಂದ ವಾಪಸ್ಸಾದ 2,127 ಜನರನ್ನ ಜೆನೆಟಿಕ್ ಸೀಕ್ವೆನ್ಸ್ ಟೆಸ್ಟ್ ಗೆ ಒಳಪಡಿಸಬೇಕು. ಜೆನೆಟಿಕ್ ಪರೀಕ್ಷೆಯಲ್ಲಿ ಹೊಸ ವೈರಸ್ ಪತ್ತೆಯಾದ್ರೆ, ಅವರ ಏರಿಯಾ ಸೀಲ್‍ಡೌನ್ ಮಾಡೋದು ಅನಿವಾರ್ಯ. ಬ್ರಿಟನ್ ವೈರಸ್ ಸೋಕಿದವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಟ್ರೇಸ್ ಆಗಬೇಕು. ಪ್ರತಿಯೊಬ್ಬರ ಟ್ರಾವೆಲ್ ಹಿಸ್ಟರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಬ್ರಿಟನ್‍ನಿಂದ ಬಂದವರ, ಅವರ ಬಂಧುಬಳಗದ ಜೊತೆ ಸಂಪರ್ಕದಲ್ಲಿದ್ದವರನ್ನು ಹಿಡಿಯಬೇಕು.

ಬ್ರಿಟನ್ ಭೂತದ ಕಡಿವಾಣಕ್ಕೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಬೇಕಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಪಾಸಿಟಿವ್ ಹೆಚ್ಚು ಬಂದ ಸ್ಥಳಗಳಲ್ಲಿ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಬೇಕು. ಬೆಡ್ ವ್ಯವಸ್ಥೆ ಹೆಚ್ಚಳ ಮಾಡಬೇಕು, ಕೋವಿಡ್ ಕೇರ್ ಸೆಂಟರ್ ಮತ್ತೆ ಓಪನ್ ಮಾಡಬೇಕು.

Click to comment

Leave a Reply

Your email address will not be published. Required fields are marked *