– ದಸರಾದಲ್ಲಿ ಕಂಬಳ ಅಗತ್ಯ ಇರಲಿಲ್ಲ
ಮೈಸೂರು: ಮೈಸೂರು ದಸರಾ (Mysuru Dasara) ಖಾಸಗಿ ದರ್ಬಾರ್ ಬಗ್ಗೆ ರಾಜಮನೆತನದ ಪ್ರಮೋದದೇವಿ ಒಡೆಯರ್ (Pramoda Devi Wadiyar) ಅವರು ಮಾಹಿತಿ ನೀಡಿದ್ದಾರೆ.
ಅ.5 ರಂದು ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ಅ.11ಕ್ಕೆ 11:45ಕ್ಕೆ ಖಾಸಗಿ ದರ್ಬಾರ್ ಆರಂಭವಾಗಲಿದೆ. ಅ.16 ರಂದು ಸರಸ್ವತಿ ಪೂಜೆ ನೆರವೇರಲಿದೆ. ಅ.20ರ ಬೆಳಗ್ಗೆ 11:35ಕ್ಕೆ ಆಯುಧ ಪೂಜೆ ನಡೆಯಲಿದೆ. ಅ.21 ರಂದು ಬೆಳಗ್ಗೆ 8:15ಕ್ಕೆ ವಿಜಯದಶಮಿ ಮೆರವಣಿಗೆ ನೆರವೇರಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಚರಣೆಯಿಂದ ಪ್ರವಾಸೋದ್ಯಮದವರೆಗೆ; ಮೈಸೂರು ದಸರಾದಲ್ಲಿ ಏನೆಲ್ಲ ಇರುತ್ತೆ?

ಕಂಬಳ ಮಾಡುವುದು ಬೇಡ
ದಸರಾದಲ್ಲಿ ಕಂಬಳ ಮಾಡುವುದು ಬೇಡ. ದಸರಾದಲ್ಲಿ ಕಂಬಳ (Kambala) ನಡೆಸುವ ಅಗತ್ಯ ಇರಲಿಲ್ಲ. ಈ ಸಮಯದಲ್ಲಿ ಕಂಬಳ ಮಾಡುವುದರಿಂದ ಕಂಬಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗಲ್ಲ. ದಸರಾ ಮುಗಿದ ಮೇಲೆ ಕಂಬಳೋತ್ಸವ ಮಾಡಬಹುದಿತ್ತು.
ಕೇರಳದಲ್ಲಿ ಓಣಂ ಮಾಡುತ್ತಾರೆ. ಮಂಗಳೂರಿನಲ್ಲಿ ಮತ್ತೊಂದು ಉತ್ಸವ ಮಾಡುತ್ತಾರೆ. ಆ ಉತ್ಸವ ವೇಳೆ ಆನೆ ಕಟ್ಟಿ ಮೆರವಣಿಗೆ ಮಾಡ್ತಿನಿ ಅಂದರೆ ಚೆನ್ನಾಗಿರುತ್ತಾ? ಕಂಬಳಕ್ಕೆ ತನ್ನದೆ ಆದ ವೈಶಿಷ್ಟ್ಯತೆ ಇದೆ. ಅದನ್ನು ನಾವು ಕಾಪಾಡಿಕೊಳ್ಳಬೇಕು. ಸರ್ಕಾರ ಕಂಬಳದ ಬಗ್ಗೆ ನನ್ನ ಅಭಿಪ್ರಾಯ ಕೇಳಿಲ್ಲ. ಅಭಿಪ್ರಾಯ ಕೇಳಿದರೆ ಇದನ್ನೇ ಹೇಳ್ತಿನಿ. ದಸರಾ ಅಂದರೆ ಅದ್ಧೂರಿ. ಇದರಲ್ಲಿ ಸರಳ, ಅದ್ಧೂರಿ ಅಂತಾ ಇರಲ್ಲ ಎಂದರು.
ಅಕ್ಕಪಕ್ಕದ ಸಿಎಂ ಗಳನ್ನು ದಸರಾಗೆ ಕರೆಯೋದು ತಪ್ಪಿಲ್ಲ. ದಸರಾಗೆ ಎಲ್ಲರನ್ನೂ ಕರೆಯಬೇಕು. ಇದು ಮನೆಯ ಹಬ್ಬ. ನಮಗೆ ಎಲ್ಲರೂ ಬೇಕು ಎಂದರು.
ರಾಜಮನೆತನದ ಮೇಲಿರುವ ಕೇಸ್‌ಗಳ ಬಗ್ಗೆ ಪ್ರತಿಕ್ರಿಯಿಸಿ, ಲೆಕ್ಕಕ್ಕೆ ಸಿಗದಷ್ಟು ಕೇಸ್‌ಗಳು ಇನ್ನೂ ನ್ಯಾಯಾಲಯದಲ್ಲಿವೆ. ಎಣಿಸಲು ಆಗದಷ್ಟಿವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬದುಕಿದ್ದಾಗ ಎಷ್ಟು ಕೇಸ್ ಇದ್ದವೋ ಈಗಲೂ ಅಷ್ಟೇ ಇವೆ ಎಂದಿದ್ದಾರೆ.
ದಸರಾ ಟಿಕೆಟ್
ಇಂದಿನಿಂದ (ಸೆ.21) ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಆನ್‌ಲೈನ್‌ನಲ್ಲಿ ಮಾರಾಟ ಆರಂಭವಾಗಿದೆ. ಒಂದು ಗೋಲ್ಡ್ ಕಾರ್ಡ್, ಒಂದು ಟಿಕೆಟ್‌ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರಲಿದೆ. ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಪ್ರವೇಶ ಇರಲಿದೆ. https://www.mysoredasara.gov.in/ ಈ ಲಿಂಕ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ದಸರಾ ಸೊಬಗು, ಅರಮನೆ ಬೆಡಗು – ದಸರೆಯಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು!

