ಪ್ರಧಾನಿ ಮೋದಿ ಎದುರು ರಾಹುಲ್‍ಗೆ ಭಾರೀ ಮುಖಭಂಗ

ನವದೆಹಲಿ: ಸಹರಾ ಬಿರ್ಲಾ ಡೈರಿ ಪ್ರಕರಣದಲ್ಲಿ ಪ್ರಧಾನಿ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆಗೆ ಸೂಚಿಸುವಂತೆ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ತಿರಸ್ಕೃತವಾಗಿದೆ. ಈ ಮೂಲಕ ನಾನು ಮಾತನಾಡಿದರೆ ಭೂಕಂಪ ಆಗುತ್ತೆ ಎಂದಿದ್ದ ರಾಹುಲ್ ಗಾಂಧಿಗೆ ತೀವ್ರ ಮುಖಭಂಗವಾಗಿದೆ.

ಪ್ರಶಾಂತ್ ಭೂಷಣ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಖಚಿತ ಮಾಹಿತಿ ಇಲ್ಲದೆ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ. ಸಹರಾ ಬಿರ್ಲಾ ಡೈರಿಯಲ್ಲಿರುವ ಅಂಶಗಳನ್ನು ದಾಖಲೆಗಳಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಸಹರಾ ಮತ್ತು ಬಿರ್ಲಾ ಕಂಪನಿಗಳಿಂದ ವಶಪಡಿಸಿಕೊಂಡಿದ್ದ ದಾಖಲೆಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹಣ ಸಂದಾಯ ಮಾಡಿರುವ ಅಂಶಗಳಿವೆ. ಹೀಗಾಗಿ ಈ ಪ್ರಕರಣಕ್ಕೆ ವಿಶೇಷ ತನಿಖಾ ತಂಡವನ್ನುರಚಿಸಲು ಆದೇಶಿಸಬೇಕು ಎಂದು ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಗುಜರಾತ್‍ನ ಮೆಹ್ಸನಾದಲ್ಲಿ ಕಳೆದ ತಿಂಗಳು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಸಹರಾ ಕಂಪೆನಿಯಿಂದ 40 ಕೋಟಿ ಲಂಚ ಪಡೆದಿದ್ದಾರೆ, ಸಹರಾ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಬಗ್ಗೆ ದಾಖಲೆಗಳು ಸಿಕ್ಕಿದೆ ಎಂದು ಆರೋಪಿಸಿದ್ದರು.

LEAVE A REPLY