– ಒಬ್ಬ ಡ್ರೈವರ್ ಮಗನಿಗೆ ಇಷ್ಟೊಂದು ಹೆದರಬೇಕಾ?
– ಷಡ್ಯಂತ್ರಗಳಿಗೆಲ್ಲ ಹೆದರುವ ಕುಟುಂಬ ನಮ್ಮದಲ್ಲ
– ಪರ-ವಿರೋಧ ಚರ್ಚೆಗೆ ತಾಯಿ ಪುಷ್ಪಮ್ಮ ಉತ್ತರ
ಷಡ್ಯಂತ್ರಗಳಿಗೆಲ್ಲ ಹೆದರುವ ಕುಟುಂಬ ನಮ್ಮದಲ್ಲ, ಹೆದರುವ ಹಾಗಿದ್ದರೇ ಇಷ್ಟುದೊಡ್ಡ ಸಿನಿಮಾ ಕೊಡೋಕೆ ಆಗ್ತಿತ್ತಾ? ಯಶ್ ಟೆರರಿಸ್ಟ್ ಅಲ್ಲ… ಅವರೇಕೆ ಹೆದರಬೇಕು? ಎಂದು ಯಶ್ ಅವರ ತಾಯಿ ಪುಷ್ಪಮ್ಮ (Pushpa Arunkumar) ಖಡಕ್ ಉತ್ತರ ನೀಡಿದ್ದಾರೆ.
ನಟ ಯಶ್ (Yash) ಅವರ ಸಿನಿ ಪಯಣ, ಅಭಿಮಾನಿಗಳ ಪ್ರೀತಿ ಹಾಗೂ ಅವರ ಯಶಸ್ಸಿನ ಬಗ್ಗೆ ನಡೆಯುತ್ತಿರುವ ಪರ-ವಿರೋಧ ಚರ್ಚೆಗೆ ಯಶ್ ಅವರ ತಾಯಿ ಖಡಕ್ ಮಾತುಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲೆಂದು ಹಾರೈಸಿದ ಯೋಗರಾಜ್ ಭಟ್
ʻʻತಾಯಿ ಆಗಿ ನಾನು ಹೇಳೋದಕ್ಕಿಂತ ಅಭಿಮಾನಿಗಳು ಖುಷಿಯಾಗಿ ಏನು ಕೊಡಬೇಕೋ ಅದನ್ನು ಕೊಡುತ್ತಿದ್ದಾರೆ. ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ (Toxic cinema) ನೋಡುತ್ತಿರುವುದು, ನಮ್ಮ ಆಡಿಯನ್ಸ್ ಈ ಮಟ್ಟಿಗೆ ಯಶ್ ಅವರನ್ನು ಅರ್ಥಮಾಡಿಕೊಂಡಿರುವುದು ನನಗೆ ಖುಷಿ ಕೊಟ್ಟಿದೆ. ಯಶ್‌ನನ್ನು ನೋಡಿ ಖುಷಿಯಾಗುವುದಕ್ಕಿಂತ ಅಭಿಮಾನಿಗಳನ್ನ ನೋಡಿ ಖುಷಿಯಾಗುತ್ತಿದೆ. ಅವರೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಬಡವರ ಮಕ್ಕಳನ್ನ ತುಳಿಯಲಾಗುತ್ತಿದೆ ಎಂಬ ಭಾವನೆಯಿಂದಲೇ ಅಭಿಮಾನಿಗಳು ಮುಂದೆ ಬಂದು ಸಿನಿಮಾ ನೋಡುತ್ತಿದ್ದಾರೆ. ಯಶ್ ಏನೂ ಇಲ್ಲದೇ ಬಂದವನು. ಅವನು ಯಾರದ್ದೋ ಹಣ, ಪ್ರಭಾವ ಇಟ್ಟುಕೊಂಡು ಬಂದವನಲ್ಲ ಎಂದು ಹೇಳಿದ್ದಾರೆ ಪುಷ್ಪಮ್ಮ.
ಯಾರವನು ಅಂತ ಕೇಳೋರಿಗೆ ಉತ್ತರ ಕೊಡ್ತೀನಿ
ಯಶ್ ಅವರ ಯಶಸ್ಸನ್ನು ಕೆಜಿಎಫ್ ನಂತರದ ಬೆಳವಣಿಗೆಯಷ್ಟೇ ಎಂದು ನೋಡುವವರಿಗೆ ತಾಯಿ ತಿರುಗೇಟು ನೀಡಿದ್ದಾರೆ. ʻʻಕೆಜಿಎಫ್‌ಗೂ ಮುನ್ನ ಯಾರವನು ಅಂತ ಕೇಳುವವರಿಗೆ ನಾನು ಉತ್ತರ ಕೊಡ್ತೀನಿ. ಕೆಜಿಎಫ್‌ಗೂ ಮುಂಚೆಯೇ ಯಶ್ ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾನೆ. ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡಿದ್ದಾನೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್
ಯಶ್ ಟೆರರಿಸ್ಟ್ ಅಲ್ಲ… ಯಾಕೆ ಭಯ?
ಯಶ್ ಟೆರರಿಸ್ಟ್ ಅಲ್ಲ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಕರ್ನಾಟಕದಲ್ಲಿ ರಾಜನಂತೆ ಬಾಳಿ, ತನ್ನ ಪರಿಶ್ರಮದಿಂದ ಈ ಮಟ್ಟಕ್ಕೆ ಬಂದಿದ್ದಾನೆ. ಇಷ್ಟೆಲ್ಲ ಸಾಧಿಸಿರುವ ಒಬ್ಬ ಬಡವರ ಹುಡುಗನ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯವೇನು? ದುಡ್ಡು ಇಟ್ಟುಕೊಂಡು ಬಂದವರು ಯಶ್‌ನನ್ನ ನೋಡಿ ಯಾಕೆ ಹೆದರಬೇಕು? ಹೆದರಬೇಕಾದ ಪರಿಸ್ಥಿತಿ ಇದ್ದರೇ ಅವರು ನಾಚಿಕೆ ಪಡಬೇಕು. ನಾನು ಇಂತಹ ಮಗನನ್ನ ಹೆತ್ತಿರುವುದಕ್ಕೆ ಹೆಮ್ಮೆಪಡುತ್ತೇನೆ. ಯಾಕೆ ಅವರನ್ನ ನೋಡಿ ಹೆದರಬೇಕು? ಎಂದು ಖಡಕ್ ಆಗಿ ಹೇಳಿದ್ದಾರೆ.
ಷಡ್ಯಂತ್ರಕ್ಕೆಲ್ಲ ಹೆದರೋ ಕುಟುಂಬ ನಮ್ಮದಲ್ಲ
ಯಶ್ ಅವರ ಕುಟುಂಬ ಯಾವುದೇ ಒತ್ತಡ ಅಥವಾ ಷಡ್ಯಂತ್ರಕ್ಕೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಆವತ್ತೇ ಹೆದರಿಲ್ಲ, ಇವತ್ತು ಹೆದರ್ತೀವಾ? ಯಶ್ ಎಲ್ಲವನ್ನೂ ದಾಟಿ ಬಂದಿದ್ದಾನೆ. ಷಡ್ಯಂತ್ರಕ್ಕೆಲ್ಲ ಹೆದರೋ ಕುಟುಂಬ ನಮ್ಮದಲ್ಲ. ಯಾಕೆ ಹೆದರಬೇಕು? ಕಳ್ಳತನ ಮಾಡಿದ್ದೀವಾ? ಇಲ್ಲೇ ಹುಟ್ಟಿ ಬೆಳೆದಿಲ್ವಾ? ಸಿನಿಮಾ ಮಾಡಿಲ್ವಾ? ಬೇರೆ ಭಾಷೆಗೆ ಸಿನಿಮಾವನ್ನು ತಗೊಂಡೋಗಿಲ್ವಾ? ಹೆದರೋದಾಗಿದ್ದರೆ ಇಷ್ಟು ದೊಡ್ಡ ಸಿನಿಮಾ ಕೊಡಲು ಆಗುತ್ತಿತ್ತಾ? ವಿಶ್ವ ಆಳುವವರು ಹೆದರೋಕಾಗುತ್ತಾ? ಷಡ್ಯಂತ್ರ ಮಾಡಿದರೆ ಹೆದರಿ ಸಿನಿಮಾ ಬಿಡೋಕಾಗುತ್ತಾ? ಎಂದು ಹೇಳಿದ್ದಾರೆ.
ಒಬ್ಬ ಡ್ರೈವರ್ ಮಗನಿಗೆ ಇಷ್ಟೊಂದು ಹೆದರಬೇಕಾ?
ಯಶ್ ಅವರ ಹಿನ್ನೆಲೆಯನ್ನ ಉಲ್ಲೇಖಿಸಿ ಮಾತನಾಡಿದ ಅವರು, ಒಬ್ಬ ಡ್ರೈವರ್ ಮಗನಿಗೆ ಇಷ್ಟೊಂದು ಹೆದರಬೇಕಾ? ಅಲ್ಲಿಗೆ ಯಶ್ ಕಂಡ್ರೆ ಎಷ್ಟು ಭಯ ಇದೆ ಅನ್ನೋದನ್ನು ಅವರೇ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ʻಟಾಕ್ಸಿಕ್ʼ ಭರ್ಜರಿ ಓಪನಿಂಗ್ – ಇಂದಿನಿಂದ ʻರಾಯʼನ ಅಬ್ಬರ; ಮುಗಿಲುಮುಟ್ಟಿದ ಫ್ಯಾನ್ಸ್ ಸಂಭ್ರಮ
