– 12,000 ಥಿಯೇಟರ್, 15,000+ ಸ್ಕ್ರೀನ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಇಂದು ಜಗತ್ತಿನಾದ್ಯಂತ ತೆರೆಕಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸುಮಾರು ನಾಲ್ಕುವರೆ ವರ್ಷಗಳ ಬಳಿಕ ಯಶ್ ಮತ್ತೆ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳ ಮುಂದೆ ಫ್ಯಾನ್ಸ್ ಅಬ್ಬರ ಜೋರಾಗಿದೆ.

ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೂ 500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡಿದೆ. ಬಹುಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಮೊದಲ ಶೋ ವೀಕ್ಷಿಸಲು ಅಭಿಮಾನಿಗಳು ಮುಂಜಾನೆಯಿಂದಲೇ ಥಿಯೇಟರ್‌ಗಳತ್ತ ಹರಿದುಬಂದಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ಬೆಳಿಗ್ಗೆ 5.45ಕ್ಕೆ ಮೊದಲ ಪ್ರದರ್ಶನ ಆರಂಭವಾಗಿದೆ. ಇಲ್ಲಿ ಒಟ್ಟು 6 ಶೋಗಳ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಎಲ್ಲಾ ಶೋಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಫಸ್ಟ್ ಶೋ ವೀಕ್ಷಿಸಲು ಬಂದ ಯಶ್ ಅಭಿಮಾನಿಗಳು ಥಿಯೇಟರ್ ಮುಂಭಾಗದಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ.

ಇತ್ತ ಮೆಜೆಸ್ಟಿಕ್‌ನ ಸಂತೋಷ್ ಥಿಯೇಟರ್ ಬಳಿಯೂ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಪರದೆಯ ಮೇಲೆ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳಿಂದ ಜೈಕಾರ, ಶಿಳ್ಳೆ, ಚಪ್ಪಾಳೆ ಮತ್ತು ಯಶ್ ಘೋಷಣೆಗಳು ಮೊಳಗಿವೆ. ಯಶ್‌ರ ಎಂಟ್ರಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದು, ಸ್ಕ್ರೀನ್ ಮೇಲೆ ರಾಕಿಂಗ್ ಸ್ಟಾರ್ ಕಾಣಿಸಿಕೊಂಡ ಕ್ಷಣ ಹೂಮಳೆ ಸುರಿಸಿ ಸಂಭ್ರಮಿಸಿದ್ದಾರೆ.

‘ಟಾಕ್ಸಿಕ್’ ಕ್ರೇಜ್‌ಗೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಯಶ್ ಅವರ ಕಂಬ್ಯಾಕ್ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿದೆ.

