ರಾಕಿಂಗ್ ಸ್ಟಾರ್ ಯಶ್(Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್(Toxic) ಚಿತ್ರ ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 140 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡಿದೆ.
ಭಾರತದಲ್ಲಿ ಈ ಚಿತ್ರ 120.75 ಕೋಟಿ ರೂ., ವಿದೇಶಗಳಲ್ಲಿ 20 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಬಹುತೇಕ ಫ್ಯಾನ್ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.
ಈ ವರ್ಷ ರಿಲೀಸ್ ಆದ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ಈ ಸಾಲಿನಲ್ಲಿ ಮೊದಲ ದಿನ 146 ಕೋಟಿ ರೂ. ಗಳಿಸಿದ್ದ ‘ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, ‘ಟಾಕ್ಸಿಕ್’ ಎರಡನೇ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ಟಾಕ್ಸಿಕ್ ಹೊಸ ಇತಿಹಾಸ ಕೆತ್ತಲೆಂದು ಹಾರೈಸಿದ ಯೋಗರಾಜ್ ಭಟ್
ಬೆಂಗಳೂರು ನಗರವೊಂದರಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಸಿನಿಮಾಗೆ ಹೌಸ್‌ಫುಲ್ ಓಪನಿಂಗ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ ಶೇ.55ಕ್ಕೂ ಹೆಚ್ಚು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.
ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ‘ಕೆಜಿಎಫ್ 2’ ಮೂಲಕ ಈ ರೀತಿಯ ಬಿಗ್ ಓಪನಿಂಗ್ ದಾಖಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿರುವ ಯಶ್, ತಮ್ಮದೇ ದಾಖಲೆಯನ್ನು ಮುಂದುವರಿಸಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.
