Connect with us

Districts

ಪಿಎಸ್‍ಐ ಅಮಾನತಿಗೆ ಜೆಡಿಎಸ್ ಪಟ್ಟು – ಅಮಾನತುಗೊಳಿಸಿದ್ರೆ ನಮ್ಮನ್ನೂ ಸಸ್ಪೆಂಡ್ ಮಾಡುವಂತೆ ಸಿಬ್ಬಂದಿ ಒತ್ತಡ

Published

on

ಯಾದಗಿರಿ: ನಗರ ಠಾಣೆ ಪಿಎಸ್‍ಐ ಬಾಪುಗೌಡ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಪೊಲೀಸ್ ಇಲಾಖೆ ಮತ್ತು ರಾಜಕಾರಣಿಗಳ ತಿಕ್ಕಾಟದ ಸ್ವರೂಪ ಪಡೆದುಕೊಂಡಿದೆ.

ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆಗೆ ಮಣಿದು ಎಸ್.ಪಿ ಋಷಿಕೇಶ್ ಭಗವಾನ್ ಪಿಎಸ್‍ಐ ಬಾಪುಗೌಡರನ್ನು ಅಮಾನತು ಮಾಡಲು ನಿರ್ಧರಿಸುತ್ತಿದ್ದಂತೆ ಜಿಲ್ಲಾ ಪೋಲಿಸ್ ಇಲಾಖೆ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಎಸ್‍ಐ ಅಮಾನತು ಮಾಡಿದರೆ ಸಾಮೂಹಿಕವಾಗಿ ನಮ್ಮನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದಿರುವ ನಗರ ಠಾಣೆಯ ಸುಮಾರು 69 ಸಿಬ್ಬಂದಿ ಎಸ್ಪಿಗೆ ಒತ್ತಡ ಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಜೆಡಿಎಸ್ ಕಾರ್ಯಕರ್ತರಿಂದ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಜೆಡಿಎಸ್ ಕಾರ್ಯಕರ್ತರ ಮನವೊಲಿಸಲು ಸ್ವತಃ ಈಶಾನ್ಯ ವಲಯದ ಐಜಿಪಿ ಮನೀಶ್ ಅವರು, ಮಧ್ಯರಾತ್ರಿ 2 ಗಂಟೆಯವರೆಗೂ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಒಂದು ಕಡೆ ರಾಜಕೀಯ ಒತ್ತಡ ಮತ್ತೊಂದು ಕಡೆ ಸಿಬ್ಬಂದಿಗಳ ಒತ್ತಡ ಎಸ್‍ಪಿ ಋಷಿಕೇಶ್ ಭಗವಾನ್ ಅವರಿಗೆ ನುಂಗಲಾರದ ತುಪ್ಪದಂತಾಗಿದೆ.

ತಮ್ಮ ಬೇಡಿಕೆ ಈಡೇರದ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲವೆಂದು ಜೆಡಿಎಸ್ ಕಾರ್ಯಕರ್ತರರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾಳೆಯಿಂದ ಉಗ್ರ ರೂಪದ ಹೋರಾಟದ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈ ಪ್ರತಿಭಟನೆಗೆ ಸಾಥ್ ನೀಡುವ ಸಾಧ್ಯತೆಯಿದೆ.

ಪ್ರತಿಭಟನೆಗೆ ಕಾರಣವೇನು?
ಜೆಡಿಎಸ್ ಕಾರ್ಯಕರ್ತ ಮಾರ್ತಾಂಡ ಅವರಿಗೆ ಪಿಎಸ್‍ಐ ಬಾಪುಗೌಡರಿಂದ ಎನ್‍ಕೌಂಟರ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಯಾದಗಿರಿ ನಗರ ಪೊಲೀಸ್ ಠಾಣೆ ಎದುರು ಏಕಾಏಕಿ ಪ್ರತಿಭಟನೆ ಶುರು ಮಾಡಿದ್ದಾರೆ. ಸಿಎಂ ಬಿಎಸ್‍ವೈ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ಮಾರ್ತಾಂಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಶರಣನಗೌಡ ಕಂದಕೂರ ಪಾತ್ರವಿದೆ ಎಂದು ಸುಳ್ಳು ಸಾಕ್ಷಿ ಹೇಳಲು ಪಿಎಸ್‍ಐ ಬಾಪುಗೌಡ ಮಾರ್ತಾಂಡ ಅವರಿಗೆ ಬಲವಂತ ಮಾಡಿದ್ದಾರೆ. ಮಾರ್ತಾಂಡ ಮೇಲೆ ಕಾನೂನು ಬಾಹಿರವಾಗಿ ಕ್ರಮಕ್ಕೆ ಪಿಎಸ್‍ಐ ಮುಂದಾಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯುತ್ತಿದೆ.