ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಎಲ್ಲಾ ಸಾಮಾನ್ಯ. ಹೀಗಿರುವಾಗ ಪ್ರತಿಯೊಬ್ಬರೂ ಮನೆಯಲ್ಲಿ ಕೆಮ್ಮು, ಶೀತ, ಜ್ವರದ ಮದ್ದನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಕೆಮ್ಮು ಬಂದಾಗ ಕೆಲವರು ಮನೆಮದ್ದು, ಕಷಾಯಗಳನ್ನು ಟ್ರೈ ಮಾಡಿದರೆ ಇನ್ನೂ ಕೆಲವರು ಮೆಡಿಕಲ್‌ಗಳಲ್ಲಿ (Medical) ದೊರೆಯುವ ಕೆಮ್ಮಿನ ಸಿರಪ್‌ಗಳನ್ನು (Syrup Medicines) ಕುಡಿಯುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಕೆಮ್ಮು ಸಿರಪ್‌ಗಳಿವೆ. ಆದ್ರೆ ದೇಹದ ಆರೋಗ್ಯ ಕಾಪಡುವ ಕೆಲ ಸಿರಪ್‌ಗಳೇ ಇಂದು ಜೀವ ತೆಗೆಯುತ್ತಿವೆ. ಆದ್ದರಿಂದಲೇ ಕೇಂದ್ರ ಸರ್ಕಾರ ಪ್ರತಿಯೊಂದು ಜೀವ ಉಳಿಸುವ ನಿಟ್ಟಿನಲ್ಲಿ ಎಚ್ಚರಿಕೆಯ ಕ್ರಮ ಕೈಗೊಂಡಿದೆ.
ಹೌದು. ಇನ್ಮುಂದೆ ದೇಶದ ಮೆಡಿಕಲ್ ಸ್ಟೋರ್‌ಗಳಲ್ಲಿ ಕೆಮ್ಮು ಸಹಿತ ಯಾವುದೇ ಸಿರಪ್‌ನ ಮಾರಾಟಕ್ಕೆ ವೈದ್ಯರ ಚೀಟಿಯನ್ನು ಕಡ್ಡಾಯಗೊಳಿಸಿ ಆರೋಗ್ಯ ಸಚಿವಾಲಯ (Health Hinistry) ಆದೇಶ ಹೊರಡಿಸಿದೆ. ಈ ಸಂಬಂಧ ಹಾಲಿ ನಿಯಮಾವಳಿಗಳಿಗೆ ತಿದ್ದುಪಡಿ ತಂದಿರುವ ಆರೋಗ್ಯ ಇಲಾಖೆ ಈವರೆಗೆ ಸಿರಪ್ ಮಾರಾಟಕ್ಕೆ ಸಂಬಂಧಿಸಿದಂತೆ ಇದ್ದ ವಿನಾಯಿತಿಯನ್ನು ತೆಗೆದುಹಾಕಿದ್ದು, ವೈದ್ಯರ ಚೀಟಿಯ ಬಳಿಕವೇ ಸಿರಪ್‌ಗಳನ್ನ ಗ್ರಾಹಕರಿಗೆ ನೀಡುವಂತೆ ಎಲ್ಲ ಔಷಧಾಲಯಗಳಿಗೆ ಸೂಚನೆ ನೀಡಿದೆ. ಔಷಧಗಳ ಗುಣಮಟ್ಟ ಖಾತರಿಪಡಿಸುವ ಜೊತೆಗೆ ರೋಗಿಗಳ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ಆರೋಗ್ಯ ಇಲಾಖೆಯ ಈ ನಿರ್ಧಾರ ಅತ್ಯಂತ ಮಹತ್ವದ್ದಾಗಿದೆ.

ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸಹಿತ ದೇಶದ ವಿವಿಧೆಡೆಗಳಲ್ಲಿ ಮಕ್ಕಳಾದಿಯಾಗಿ ಹಲವರು ಕಫ ಮತ್ತು ಕೆಮ್ಮಿನ ಸಿರಪ್‌ಗಳನ್ನ ಸೇವಿಸಿ ಸಾವನ್ನಪ್ಪಿದ್ದರು. ಈ ಸರಣಿ ಸಾವುಗಳ ಬಗ್ಗೆ ದೇಶಾದ್ಯಂತ ತೀವ್ರ ಆತಂಕ ವ್ಯಕ್ತವಾಗಿತ್ತು. ಸಿರಪ್ ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ವಿಷಕಾರಿ ರಾಸಾಯನಿಕಗಳನ್ನ ಅಧಿಕ ಪ್ರಮಾಣದಲ್ಲಿ ಸೇರಿಸಿದ್ದುದು ಇದಕ್ಕೆ ಕಾರಣವಾಗಿತ್ತು. ಈ ಸಿರಪ್ ಸೇವಿಸಿದವರ ಯಕೃತ್ ಮತ್ತು ಮೂತ್ರಪಿಂಡದ ಮೇಲೆ ತೀವ್ರತೆರನಾದ ಪರಿಣಾಮ ಬೀರಿದ್ದು, ಅಂಗಾಂಗ ವೈಫಲ್ಯಕ್ಕೀಡಾಗಿ ಸಾವನ್ನಪ್ಪಿದ್ದು ವೈದ್ಯಕೀಯ ಪರಿಶೀಲನೆ ವೇಳೆ ಬಯಲಾಗಿತ್ತು. ಆ ಬಳಿಕ ಸಿರಪ್‌ಗೆ ನಿಷೇಧ ಹೇರಿದ್ದಲ್ಲದೇ ತಯಾರಿಕ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಇನ್ನಷ್ಟು ಕಠಿಣ ನಿಯಮಾವಳಿಗಳನ್ನ ರೂಪಿಸಿದೆ.
ಸಿರಪ್‌ಗಳ ಕುರಿತಂತೆ ಆಕ್ಷೇಪಣೆ ಆಹ್ವಾನಿಸಿ, ಈಗ ಹಾಲಿ ಜಾರಿಯಲ್ಲಿರುವ ನಿಯಮಾವಳಿಗೆ ತಿದ್ದುಪಡಿ ತಂದು ಹೊಸ ಅಧಿಸೂಚನೆಯನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಸಿರಪ್‌ಗಳ ನೇರ ಖರೀದಿಗೆ ಬ್ರೇಕ್ ಹಾಕಿದೆ. ಇದಕ್ಕೆ ಕಾರಣ ವೇನು? ಕೇಂದ್ರ ಸರ್ಕಾರ ಈಗಾಗಲೇ ಜಾರಿಯಲ್ಲಿರುವ ನಿಯಮಗಳಿಗೆ ತಿದ್ದುಪಡಿ ತಂದಿದ್ದೇಕೆ? ಅನ್ನೋದ್ರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಕೇಂದ್ರದ ಸೂಚನೆ ಏನು?
ಔಷಧಗಳ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರ ಶಿಫಾರಸು (ರಶೀದಿ) ಇಲ್ಲದೇ ಯಾವುದೇ ಸಿರಪ್‌ಗಳ ಮಾರಾಟವನ್ನ ನಿಷೇಧಿಸಲಾಗಿದೆ. ಈ ಮೊದಲಿದ್ದ ನಿಯಮಗಳ ಪ್ರಕಾರ, ʻ1 ಸಾವಿರಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳಲ್ಲಿನ ಚಿಲ್ಲರೆ ವರ್ತಕರು, ಕೆಮ್ಮಿನ ಸಿರಪ್‌ಗಳನ್ನ ಮಾರಾಟ ಮಾಡಬಹುದಿತ್ತು. ಹೊಸ ಸೂಚನೆಯ ಅನ್ವಯ ಈಗ ಸಣ್ಣ ವರ್ತಕರು ಕೆಮ್ಮಿನ ಸಿರಪ್‌ಗಳನ್ನ ಮಾರಾಟ ಮಾಡುವಂತಿಲ್ಲ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡ್ರಗ್ಸ್ (ಐದನೇ ತಿದ್ದುಪಡಿ) ನಿಯಮಗಳು, 2026 ಕ್ಕೆ ತಿದ್ದುಪಡಿ ತಂದಿದೆ. ಇದರ ಅನ್ವಯ 1945ರ ಔಷಧ ನಿಯಮಗಳ ‘ಶೆಡ್ಯೂಲ್ ಕೆ’ (ಐಟಂ ಸಂಖ್ಯೆ 7) ಪಟ್ಟಿಯಿಂದ ‘ಸಿರಪ್‌ಗಳು’ ಎಂಬ ಪದವನ್ನು ತೆಗೆದುಹಾಕಲಾಗಿದೆ. ಉತ್ಪಾದಕರು, ವಿತರಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಕೆಮ್ಮಿನ ಸಿರಪ್ ಕುರಿತಂತೆ ಡ್ರಗ್ಸ್ ಮತ್ತು ಸೌಂದರ್ಯ ವರ್ಧಕಗಳ ಕಾಯ್ದೆ, 1940 ರ ಅಡಿ ರೂಪಿಸಲಾಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಚಿವಾಲಯ ಹೇಳಿದೆ.
ತಿದ್ದುಪಡಿ ಮಾಡಿದ್ದು ಏಕೆ?
2022 ರಲ್ಲಿ ಭಾರತದಲ್ಲಿ ತಯಾರಾಗುವ ಫಾರ್ಮುಲಾದಿಂದ ತಯಾರಾದ ಸಿರಪ್ ದಕ್ಷಿಣ ಆಫ್ರಿಕಾ ಮತ್ತು ಮಧ್ಯ ಏಷ್ಯಾಗಳಲ್ಲಿ 140 ಮಕ್ಕಳನ್ನ ಬಲಿ ಪಡೆದುಕೊಂಡಿತ್ತು. ಆ ನಂತರ ಕೆಮ್ಮಿನ ಸಿರಪ್ ಕೋಲ್ಡ್ರಿಫ್ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದಾಗಿ ಮಧ್ಯಪ್ರದೇಶದ ಛಿಂದ್ವಾಡ ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ 14 ಮಕ್ಕಳು ಮೃತಪಟ್ಟಿದ್ದರು. ಇದು ದೇಶದಲ್ಲಿನ ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಈ ಘಟನೆ ಬೆನ್ನಲ್ಲೇ, ತನಿಖೆಗಾಗಿ ಮಧ್ಯಪ್ರದೇಶ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಕೆಮ್ಮಿನ ಸಿರಪ್‌ನ ಮಾದರಿಗಳನ್ನ ಪರೀಕ್ಷಿಸಿದಾಗ, ಅದರಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕಾಲ್ (EG) ಎಂಬ ವಿಷಕಾರಿ ರಾಸಾಯನಿಕ ಇದ್ದುದು ದೃಢಪಟ್ಟಿತ್ತು. ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ತಯಾರಿಕಾ ಕಂಪನಿ, ತಮಿಳುನಾಡಿನ ಸ್ಪೇಸನ್ ಫಾರ್ಮಾಸ್ಯುಟಿಕಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕೆಮ್ಮಿನ ಸಿರಪ್‌ಗಳ ಪರೀಕ್ಷೆ ಹಾಗೂ ಅವುಗಳ ತಯಾರಕರ ಕುರಿತು ರಾಷ್ಟ್ರವ್ಯಾಪಿ ತಪಾಸಣೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಕ್ರಮ ಕೈಗೊಂಡಿತ್ತು.

ಅಷ್ಟೇ ಅಲ್ಲ ರಾಸಾಯನಿಕಗಳು ಮೂತ್ರಪಿಂಡಗಳು (ಕಿಡ್ನಿ) ಮತ್ತು ನರಮಂಡಲ ಹಾನಿಗೊಳಿಸುವುದರಿಂದ ಮಕ್ಕಳಿಗೆ ಬೇಗನೆ ಮಾರಕವಾಗುತ್ತದೆ ಎಂಬುದನ್ನು ವಿಶ್ವಾರೋಗ್ಯ ಸಂಸ್ಥೆ ವಿಜ್ಞಾನಿಗಳು ಹೇಳಿದ್ದರು. ಆ ಬಳಿಕ ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪಟ್ಟಿಯನ್ನು ಒದಗಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಕೆಮ್ಮಿನ ಸಿರಪ್‌ಗಳ ಮಾರಾಟವನ್ನು ನಿಯಂತ್ರಿಸುವ ಜೊತೆಗೆ ಅವುಗಳ ಗುಣಮಟ್ಟ ಕಾಪಾಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸಚಿವಾಲಯ ಈಗ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಸ್ವಯಂ ಡಾಕ್ಟರ್‌ಗಳಾಗೋದೇಕೆ?
ಹೊಸ ಕ್ರಮವು ವಿಷಕಾರಿ ರಾಸಾಯನಿಕಗಳ ಬಗ್ಗೆ ಮಾತ್ರವಲ್ಲ, ಕೆಮ್ಮಿನ ಸಿರಪ್‌ಗಳೊಂದಿಗೆ ಸ್ವಯಂ ಔಷಧಿಯ ಕ್ರಮ ಭಾರದಲ್ಲಿ ವ್ಯಾಪಕವಾಗಿದೆ ಎಂದು ಮೊದಲಿನಿಂದಲೂ ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ಬಹುತೇಕರು ವೈದ್ಯರನ್ನ ಸಂಪರ್ಕಿಸದೇ ಸ್ವಯಂ ವೈದ್ಯರಂತೆ ಸಿರಪ್‌ಗಳನ್ನ ಖರೀದಿಸುತ್ತಾರೆ. ದೀರ್ಘ ಕಾಲದ ಕೆಮ್ಮು, ಅಲರ್ಜಿಗಳು, ಉಸಿರಾಟದ ಸೋಂಕುಗಳು ಹಾಗೂ ಕೆಲ ಸಣ್ಣ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಪದೇ ಪದೇ ಔಷಧಗಳನ್ನ ತಾವೇ ಬಳಸುತ್ತಾರೆ.
ಆದ್ರೆ ಕೆಲವು ಕೆಮ್ಮಿನ ಸಿರಪ್‌ಗಳು ಆಂಟಿಹಿಸ್ಟಮೈನ್‌ಗಳು, ಬ್ರಾಂಕೋಡಿಲೇಟರ್‌ಗಳು ಅಥವಾ ಕೊಡೈನ್ ತರಹದ ಹಾನಿಕಾರಕ ಅಂಶಗಳು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ವೈದ್ಯರ ರಶೀದಿಗಳಿಲ್ಲದೇ, ಔಷಧ ನೇರ ಖರೀದಿ ಮಾಡುವುದನ್ನ ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಒಟ್ಟಿನಲ್ಲಿ ಸಿರಪ್‌ಗಳಲ್ಲಿ ಸಕ್ಕರೆ, ಕೃತಕ ಸುವಾಸನೆಗಳು ಮತ್ತು ಡಿಕಂಜೆಸ್ಟೆಂಟ್‌ಗಳ ಮಿಶ್ರಣವಿದ್ದು, ಇವುಗಳನ್ನು ಸರಿಯಾಗಿ ಸಮತೋಲನ ಮಾಡದಿದ್ದರೆ ಆರೋಗ್ಯಕ್ಕೆ ಮಾರಕವಾಗಬಹುದು. ಯಾವುದೇ ಕೆಮ್ಮಿನ ಸಿರಪ್‌ಗಳು ಉಸಿರಾಟದ ಸೋಂಕನ್ನು ಬುಡ ಸಮೇತ ಗುಣಪಡಿಸುವುದಿಲ್ಲ, ಬದಲಾಗಿ ರೋಗಿಗೆ ತಾತ್ಕಾಲಿಕ ರಿಲೀಫ್ ಮಾತ್ರ ನೀಡುತ್ತವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ಇವುಗಳ ಸೇವನೆ ಅಪಾಯಕಾರಿ ಎಂದು ಎಚ್ಚರಿಸಲಾಗಿದೆ.
