ಶಿವಮೊಗ್ಗ: ಸಾಗರ (Sagar) ತಾಲೂಕಿನ ತುಮರಿ ಸಮೀಪ ಶರಾವತಿ ಹಿನ್ನೀರಿನಲ್ಲಿ (Sharavathi River Backwater) ಸಿಗಂದೂರು ಸೇತುವೆ (Sigandur Bridge) ನಿರ್ಮಾಣವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಸಾಗರ ತಾಲೂಕು ಹಾಗೂ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಳೆದುಕೊಂಡು ದ್ವೀಪದಲ್ಲಿಯೇ ಬಂಧಿಯಾಗಿದ್ದ ಜನರ ದಶಕಗಳ ನೋವಿಗೆ ಸೇತುವೆಯಿಂದ ಮುಕ್ತಿ ಸಿಕ್ಕಿದೆ. ಈ ಬೃಹತ್ ಸೇತುವೆ ನಿರ್ಮಾಣದ ಮೂಲಕ ದ್ವೀಪವಾಸಿಗಳ ಬಹುಕಾಲದ ಕನಸನ್ನು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ಯೋಜನೆಯ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ಇದೇ ವೇಳೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

2025ರ ಜುಲೈ 14 ರಂದು ಉದ್ಘಾಟನೆ
ಕಳಸವಳ್ಳಿ ಮತ್ತು ಅಂಬಾರಗೊಡ್ಲು ನಡುವೆ ಸೇತುವೆ ನಿರ್ಮಿಸುವಂತೆ 6-7 ದಶಕದಿಂದಲೂ ಶರಾವತಿ ಹಿನ್ನೀರವಾಸಿಗಳು ಹೋರಾಟ ನಡೆಸುತ್ತಲೇ ಬಂದಿದ್ದರು.
ಅಂತಿಮವಾಗಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ಸೇತುವೆ ಕಾಮಗಾರಿಗೆ 2018ರ ಫೆ.19ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. 2019ರ ಡಿಸೆಂಬರ್‌ನಿಂದ ಕಾಮಗಾರಿ ಆರಂಭಗೊಂಡಿತ್ತು. 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ 2.44 ಕಿ.ಮೀ. ಉದ್ದದ ಕೇಬಲ್ ಆಧಾರಿತ ಸೇತುವೆಯನ್ನ 2025 ರ ಜುಲೈ-14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರೇ ಲೋಕಾರ್ಪಣೆ ಮಾಡಿದ್ದರು.
ಅಂದಿನಿಂದ ಜನಬಳಕೆಗೆ ಮುಕ್ತವಾದ ಸಿಗಂದೂರು ಸೇತುವೆ ಒಂದು ವರ್ಷ ಪೂರೈಸಿದ್ದು, ಸ್ಥಳೀಯರು ಸಂಭ್ರಮಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ಬಿಜೆಪಿ ಮುಖಂಡ ಟಿ.ಡಿ. ಮೇಘರಾಜ್, ಕೆ.ಜಿ.ಪ್ರಶಾಂತ್, ಮಂಜಯ್ಯ ಸಂಸೆ ಇದ್ದರು. ಇದನ್ನೂ ಓದಿ: ಶರಾವತಿ ಹಿನ್ನೀರಲ್ಲಿ ವಾಟರ್ ಏರೊಡ್ರೋಮ್ ಯೋಜನೆ – ಸಿಗಂದೂರು ಬಳಿ ಇಳಿಯಲಿದೆ ವಿಮಾನ
