ಬಾಗಲಕೋಟೆ:ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕರಾದ ಮೋಹನ್ ಭಾಗವತ್(Mohan Bhagwat) ಅವರು ಇಂದು ಬಾಗಲಕೋಟೆ(Bagalkote) ತಾಲೂಕಿನ ಕಲಾದಗಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ಗಡಿಭಾಗದ ಬೆಳಗಾವಿಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಾರ್ಗಮಧ್ಯೆ ಅವರು ಕಲಾದಗಿಯ(Kaladgi) ಸಂಘದ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ಮನೆಗೆ ಭೇಟಿ ನೀಡಿ ಗಮನ ಸೆಳೆದರು.
ದೇಶದ ಅತ್ಯುನ್ನತ ಝೆಡ್ ಪ್ಲಸ್ (Z+) ಭದ್ರತಾ ಚೌಕಟ್ಟನ್ನು ಹೊಂದಿರುವ ಮೋಹನ್ ಭಾಗವತ್ ಅವರು ಕಲಾದಗಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಗ್ರಾಮಕ್ಕೆ ಭೇಟಿ ನೀಡಿದ ಅವರು, ನೇರವಾಗಿ ಯುವ ಕಾರ್ಯಕರ್ತ ಡಾ. ಪ್ರವೀಣ್ ಭಜಂತ್ರಿ ಅವರ ನಿವಾಸಕ್ಕೆ ತೆರಳಿದರು. ಇದನ್ನೂ ಓದಿ: ಕಣ್ಣೀರಿನಿಂದ ಪ್ರೀತಿಯನ್ನು ಅಳೆಯಬೇಡಿ – ದುಃಖವನ್ನು ಪ್ರಶ್ನಿಸಿದವರಿಗೆ ಎಸ್.ಜಾನಕಿ ಮೊಮ್ಮಗಳು ಅಪ್ಸರಾ ತಿರುಗೇಟು
ಡಾ. ಪ್ರವೀಣ್ ಭಜಂತ್ರಿ ಅವರ ಮನೆಯಲ್ಲಿ ಸುಮಾರು 10 ನಿಮಿಷಗಳ ಕಾಲ ಕಳೆದ ಮೋಹನ್ ಭಾಗವತ್ ಪ್ರವೀಣ್ ಅವರ ಕುಟುಂಬ ಸದಸ್ಯರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ಅವರ ಮನೆಯಲ್ಲಿ ಚಹಾ ಸೇವಿಸಿದ ಮೋಹನ್ ಭಾಗವತ್, ಇಡೀ ಕುಟುಂಬಕ್ಕೆ ಹರಸಿದರು. ಸಂಘದ ಪರಮೋಚ್ಛ ನಾಯಕರೇ ತಮ್ಮ ಮನೆಗೆ ಭೇಟಿ ನೀಡಿದ್ದರಿಂದ ಭಜಂತ್ರಿ ಕುಟುಂಬದಲ್ಲಿ ಹರ್ಷ ವ್ಯಕ್ತವಾಗಿದೆ.
ಕಲಾದಗಿಯಲ್ಲಿ ಕೆಲಕಾಲ ಕಳೆದ ಬಳಿಕ ಮೋಹನ್ ಭಾಗವತ್ ಅವರು ನೇರವಾಗಿ ವಿಜಯಪುರ ಜಿಲ್ಲೆಗೆ ಪ್ರಯಾಣ ಬೆಳೆಸಿದರು. ವಿಜಯಪುರ ನಗರದಲ್ಲಿ ಇಂದು ಆಯೋಜಿಸಲಾಗಿರುವ ಸಂಘದ ಪ್ರಮುಖ ಸಾಂಸ್ಥಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
