ಬಳ್ಳಾರಿ: ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ್ದ ಕಲ್ಯಾಣ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ (Tungabhadra Reservoir) ಮತ್ತೆ ಜೀವಕಳೆ ಬಂದಿದೆ. ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯ (Rain) ಪರಿಣಾಮ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ 25 ಟಿಎಂಸಿ ನೀರು ಸಂಗ್ರಹವಾಗಿದೆ.
105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯವು ಇತ್ತೀಚೆಗೆ ಡೆಡ್ ಸ್ಟೋರೇಜ್ ಹಂತ ತಲುಪಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಇದೀಗ ಜಲಾಶಯದಲ್ಲಿ 25 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಸಿಗಂದೂರು ಸೇತುವೆಗೆ ಒಂದು ವರ್ಷ – ಪಟಾಕಿ ಸಿಡಿಸಿ ಸ್ಥಳೀಯರ ಸಂಭ್ರಮ

ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ನಾಳೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ; ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕ–ತ.ನಾಡು ವಾದ–ಪ್ರತಿವಾದ
ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಿನ ಕೊರತೆ ಎದುರಾಗಬಹುದು ಎಂಬ ಆತಂಕದಲ್ಲಿದ್ದ ರೈತರು ಇದೀಗ ನಿರಾಳರಾಗಿದ್ದು, ನಿರೀಕ್ಷೆಯಂತೆ ಮುಂಗಾರು ಬೆಳೆಗೆ ನೀರು ಸಿಗುವ ನಿಶ್ವಾಸದಲ್ಲಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಗಲಾಟೆ; ರಾಜಕೀಯ ಪ್ರೇರಿತ ಕಾನೂನುಬಾಹಿರ ಪ್ರತಿಭಟನೆಗೆ ಕ್ರಮ: ಪರಮೇಶ್ವರ್
