ಹಾಕಿ ಪ್ರೇಮಿಗಳಿಗೆ ಹಬ್ಬದ ಕ್ಷಣ ಶುರುವಾಗಿವೆ. 5 ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಹಾಕಿ ವಿಶ್ವಕಪ್ (Hockey World Cup) ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ದೃಢಸಂಕಲ್ಪದೊಂದಿಗೆ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳು ಅಂಗಳಕ್ಕೆ ಇಳಿಯಲು ಸಿದ್ಧವಾಗಿವೆ. ವಿಶ್ವದ ಅತ್ಯುತ್ತಮ ಹಾಕಿ ತಂಡಗಳ ನಡುವಿನ ಸೆಣಸಾಟಕ್ಕೆ ಇಂದಿನಿಂದ ಚಾಲನೆ ಸಿಗಲಿದೆ.

ಹೌದು. ಇಂದಿನಿಂದ ವಿಶ್ವ ಹಾಕಿ ಸಮರ ಶುರು. ಭಾರತದಲ್ಲಿ (India) ಅತಿ ಹೆಚ್ಚು ಅಭಿಮಾನಿಗಳು ಹಾಗೂ ಆಟಗಾರರನ್ನು ಹೊಂದಿರುವ ಕ್ರೀಡೆ ಎಂದರೆ ಅದು ಹಾಕಿ. ಈ ಕ್ರೀಡೆಯು ಪ್ರತಿಷ್ಠಿತ ಪಂದ್ಯಾವಳಿ FIH ವಿಶ್ವಕಪ್‌ನ 16ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದೆ. 51 ವರ್ಷಗಳ ಕಾಯುವಿಕೆಗೆ ತೆರೆ ಎಂಬ ಕೂತುಹಲ ಸೃಷ್ಟಿಯಾಗಿದೆ. ಈ ಬಾರಿ ಹಾಕಿ ವಿಶ್ವಕಪ್ ಹೊಸ ಮಾದರಿಯೊಂದಿಗೆ ಆರಂಭವಾಗುತ್ತಿದ್ದು, ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಆತಿಥ್ಯದಲ್ಲಿ ಪ್ರಾರ೦ಭವಾಗುತ್ತಿದೆ. ಒಟ್ಟು 15 ದಿನಗಳ ಕಾಲ ನಡೆಯಲಿದ್ದು, ಪ್ರಸ್ತುತ ವಿಶ್ವದ ಅತ್ಯುತ್ತಮ 16 ಪುರುಷ ಮತ್ತು 16 ಮಹಿಳಾ ತಂಡಗಳು ಪ್ರಶಸ್ತಿ ಬೇಟೆಗೆ ಇಳಿಯಲಿವೆ.

ಹಾಕಿ ಇತಿಹಾಸ:
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಹಾಕಿ ವಿಶ್ವಕಪ್‌ನ ಈ ಪಯಣ ಅರ್ಧ ಶತಮಾನಕ್ಕೂ ಹಿಂದಿನ ರೋಚಕ ಅಧ್ಯಾಯಗಳಿಂದ ಕೂಡಿದೆ. 1971ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಪುರುಷರ ಮೊದಲ ಹಾಕಿ ವಿಶ್ವಕಪ್‌ಗೆ ನಾಂದಿ ಹಾಡಿತು. ಬಳಿಕ 1974ರಲ್ಲಿ ಮಹಿಳಾ ಹಾಕಿ ವಿಶ್ವಕಪ್‌ಗೂ ಚಾಲನೆ ಸಿಕ್ಕಿತು. ಅಂದಿನಿಂದ ಇಂದಿನವರೆಗೆ ಕ್ರೀಡಾಂಗಣದಲ್ಲಿ ಎಷ್ಟೋ ಸಾಮ್ರಾಜ್ಯಗಳು ಉದಯಿಸಿವೆ, ಅದೆಷ್ಟೋ ದಿಗ್ಗಜರು ಅಳಿಸಿ ಹೋಗಿದ್ದಾರೆ. ಆದರೆ 1975ರಲ್ಲಿ ಕೌಲಾಲಂಪುರದಲ್ಲಿ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್ ಎತ್ತಿ ಹಿಡಿದಿದ್ದ ಭಾರತ, ವಿಶ್ವ ಹಾಕಿ ಭೂಪಟದಲ್ಲಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಿತ್ತು.
ಆ ಸುವರ್ಣ ಕ್ಷಣಕ್ಕೆ ಈಗ ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಸಂದಿದೆ. ಈ ಸುದೀರ್ಘ ಪಯಣದಲ್ಲಿ ಹಾಕಿ ಆಟದ ನಿಯಮಗಳು, ತಂತ್ರಗಾರಿಕೆ ಮತ್ತು ವೇಗ ಎಲ್ಲವೂ ಸಂಪೂರ್ಣ ರೂಪಾಂತರಗೊಂಡಿವೆ. ಅಂದು ಆರಂಭವಾದ ಆ ಐತಿಹಾಸಿಕ ಸಂಪ್ರದಾಯವೀಗ ತನ್ನ 16ನೇ ಆವೃತ್ತಿಗೆ ಕಾಲಿಟ್ಟಿದ್ದು, ಪುರುಷ ಮತ್ತು ಮಹಿಳಾ ವಿಶ್ವಕಪ್ ಎರಡೂ ಏಕಕಾಲದಲ್ಲಿ ಅಂಗಳಕ್ಕಿಳಿಯುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ.

ಮೊದಲು 2 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಹಾಕಿ ವಿಶ್ವಕಪ್:
ಆರಂಭದಲ್ಲಿ ಹಾಕಿ ವಿಶ್ವಕಪ್ ಸತತವಾಗಿ 4 ವರ್ಷಗಳಿಗೊಮ್ಮೆ ನಡೆಯುತ್ತಿರಲಿಲ್ಲ. 2 ವರ್ಷಗಳಿಗೊಮ್ಮೆ ನಡೆಯುತ್ತಿತ್ತು. ಮೊದಲ ಪುರುಷರ ಹಾಕಿ ವಿಶ್ವಕಪ್ 1971ರಲ್ಲಿ, ಎರಡನೇ ಆವೃತ್ತಿ 1973ರಲ್ಲಿ ಮತ್ತು ಮೂರನೇ ಆವೃತ್ತಿ 1975ರಲ್ಲಿ ಆಯೋಜನೆಯಾಯಿತು. ಅದಾದ ನಂತರ 3 ವರ್ಷಗಳ ಆಯೋಜಿಸಲಾಯಿತು. ನಂತರದ ಆವೃತ್ತಿಯನ್ನು 1978ರಲ್ಲಿ ಆಯೋಜಿಸಲಾಯಿತು. ಅದಾದ ಬಳಿಕ 1982ರಿಂದ ಇಂದಿನವರೆಗೆ 4 ವರ್ಷಗಳಿಗೊಮ್ಮೆ ಹಾಕಿ ವಿಶ್ವಕಪ್ ಅನ್ನು ಕ್ರಿಕೆಟ್ ಮತ್ತು ಫುಟ್‌ಬಾಲ್ ವಿಶ್ವಕಪ್‌ಗಳಂತೆಯೇ ಖಚಿತವಾಗಿ ಪ್ರತಿ 4 ವರ್ಷಗಳಿಗೊಮ್ಮೆ ನಡೆಸುವ ಮಾದರಿಯನ್ನು ಅಧಿಕೃತಗೊಳಿಸಲಾಯಿತು.
ಪ್ರಸ್ತುತ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಧಿಕೃತ ನಿಯಮಾವಳಿಗಳ ಪ್ರಕಾರ, ಪುರುಷ ಮತ್ತು ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಗಳು ಪ್ರತಿ 4 ವರ್ಷಗಳಿಗೊಮ್ಮೆ ಜರುಗುತ್ತವೆ. ಇದು ಒಲಿಂಪಿಕ್ಸ್ ಕ್ರೀಡಾಕೂಟದ ನಡುವಿನ ಮಧ್ಯದ ಎರಡು ವರ್ಷಗಳ ಅವಧಿಯಲ್ಲಿ ಬರುವಂತೆ ಆಯೋಜಿಸಲ್ಪಡುತ್ತದೆ.
ಹಾಕಿ ವಿಶ್ವಕಪ್ ಹೇಗಿರಲಿದೆ?
ಇಂದಿನಿಂದ ಆರಂಭವಾಗಲಿರುವ ಈ ಹಾಕಿ ವಿಶ್ವಕಪ್ ಹಬ್ಬ ಆ.30ರವರೆಗೆ ಅಂದರೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಈ ವಿಶ್ವಕಪ್‌ನಲ್ಲಿ ಪುರುಷರ ವಿಭಾಗದಲ್ಲಿ 16 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 16 ತಂಡಗಳು ಸೇರಿದಂತೆ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳು ಸೇರಿ 15 ದಿನಗಳಲ್ಲಿ ಒಟ್ಟು 100 ಪಂದ್ಯಗಳು ನಡೆಯಲಿವೆ.

ಮಹಿಳೆಯರ ವಿಭಾಗದ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಜಪಾನ್ ತಂಡಗಳು ಮುಖಾಮುಖಿಯಾಗಲಿದ್ದು, ಮಧ್ಯಾಹ್ನ 1.30ಕ್ಕೆ ನೆದರ್ಲೆಂಡ್ಸ್‌ನ ವಾಗನರ್ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ. ಇನ್ನೂ ಪುರುಷರ ವಿಭಾಗದ ಇಂದಿನ ಪಂದ್ಯದಲ್ಲಿ ಭಾರತ ಮತ್ತು ವೇಲ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಸಂಜೆ 4:30ಕ್ಕೆ ನೆದರ್ಲೆಂಡ್ಸ್‌ನ ವಾಗನರ್ ಸ್ಟೇಡಿಯಂನಲ್ಲಿ ಟೂರ್ನಿಗೆ ಚಾಲನೆ ಸಿಗಲಿದೆ.
ಇನ್ನೂ ಆಗಸ್ಟ್ 29 ರಂದು ನೆದರ್ಲೆಂಡ್ಸ್‌ನ ವಾಗನರ್ ಸ್ಟೇಡಿಯಂನಲ್ಲಿ ಮಹಿಳೆಯರ ವಿಭಾಗದ ಫೈನಲ್ ಹಾಗೂ ಆಗಸ್ಟ್ 30 ರಂದು ಬೆಲ್ಜಿಯಂನ ವಾವ್ರೆ ಕ್ರೀಡಾಂಗಣದಲ್ಲಿ ಪುರುಷರ ವಿಭಾಗದ ಫೈನಲ್ ನಡೆಯಲಿದೆ.

ಹಾಕಿ ವಿಶ್ವಕಪ್‌ನಲ್ಲಿ ಹೊಸ ಮಾದರಿ:
ಹಿಂದಿನ ವಿಶ್ವಕಪ್‌ಗಳಲ್ಲಿದ್ದ ‘ಕ್ವಾರ್ಟರ್ ಫೈನಲ್’ ನಾಕೌಟ್ ಹಂತವನ್ನು ಈ ಬಾರಿ ಸಂಪೂರ್ಣವಾಗಿ ಕೈಬಿಡಲಾಗಿದೆ. ಅದರ ಬದಲಿಗೆ ‘ಸೆಕೆಂಡ್ ಪೂಲ್/ಕ್ರಾಸ್ ಓವರ್ ಹಂತ’ (Second Group Stage) ತರಲಾಗಿದೆ.
16 ತಂಡಗಳನ್ನು ತಲಾ 4 ತಂಡಗಳಿರುವಂತೆ 4 ಗುಂಪುಗಳಾಗಿ (Pool A, B, C, D) ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ 2 ಸ್ಥಾನ ಪಡೆಯುವ ತಂಡಗಳು (ಒಟ್ಟು 8 ತಂಡಗಳು) ಮುನ್ನಡೆ ಸಾಧಿಸುತ್ತವೆ. ಈ 8 ತಂಡಗಳನ್ನು ಮತ್ತೆ ತಲಾ ನಾಲ್ಕರಂತೆ 2 ಹೊಸ ಗುಂಪುಗಳನ್ನಾಗಿ (Pool E ಮತ್ತು Pool F) ಮಾಡಲಾಗುತ್ತದೆ. ಈ ಎರಡನೇ ಹಂತದ ಗುಂಪುಗಳಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ತಲುಪಲಿವೆ. ಮೊದಲ ಹಂತದಲ್ಲಿ 3 ಮತ್ತು 4ನೇ ಸ್ಥಾನ ಪಡೆದ ತಂಡಗಳು 9 ರಿಂದ 16ನೇ ಸ್ಥಾನಗಳಿಗಾಗಿ ಪ್ರತ್ಯೇಕ ಗುಂಪುಗಳಲ್ಲಿ ಸೆಣಸಲಿವೆ.
ವಿಶ್ವಕಪ್‌ನಿಂದ ಹೊರಬಿದ್ದ ಮೇಲೂ ಪಂದ್ಯಗಳು ಮುಖ್ಯ:
ವಿಶ್ವಕಪ್‌ನಿಂದ ಹೊರಬಿದ್ದ ಮೇಲೂ ಈ ಪಂದ್ಯಗಳನ್ನು ಆಡುವುದು ತಂಡಗಳಿಗೆ ಬಹಳ ಮುಖ್ಯ, ವಿಶ್ವಕಪ್‌ನ ಪ್ರತಿಯೊಂದು ಪಂದ್ಯದ ಗೆಲುವು ಮತ್ತು ಅಂತಿಮ ಸ್ಥಾನವು ತಂಡದ ಅಧಿಕೃತ ‘ವಿಶ್ವ ರ‍್ಯಾಂಕಿಂಗ್’ ಮೇಲೆ ನೇರ ಪರಿಣಾಮ ಬೀರುತ್ತದೆ.
ಉತ್ತಮ ರ‍್ಯಾಂಕಿಂಗ್ ಕಾಯ್ದುಕೊಂಡರೆ ಮಾತ್ರ ಮುಂದಿನ ಒಲಿಂಪಿಕ್ಸ್ ಅರ್ಹತಾ ಸುತ್ತುಗಳು ಮತ್ತು ಇತರ ಪ್ರಮುಖ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಕೇವಲ ಲೀಗ್ ಹಂತದಲ್ಲಿ ಸೋತು ಕೊನೆಯ (16ನೇ) ಸ್ಥಾನ ಪಡೆಯುವುದಕ್ಕಿಂತ, ಕನಿಷ್ಠ 9 ಅಥವಾ 10ನೇ ಸ್ಥಾನ ಪಡೆದು ಗೌರವಯುತವಾಗಿ ವಿಶ್ವಕಪ್ ಮುಗಿಸಲು ಈ ಪಂದ್ಯಗಳು ವೇದಿಕೆ ಒದಗಿಸುತ್ತವೆ.

ವಿಶ್ವಕಪ್ ಗೆಲ್ಲುವ ತವಕದಲ್ಲಿ ಭಾರತ:
ಭಾರತ ಪುರುಷರ ತಂಡವು ಇದುವರೆಗೆ ಒಮ್ಮೆ ಮಾತ್ರ ಹಾಕಿ ವಿಶ್ವಕಪ್ ಗೆದ್ದಿದೆ. 1975ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ 3ನೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಭಾರತವು ತನ್ನ ಎದುರಾಳಿ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. 1975ರ ನಂತರ ಕಳೆದ 51 ವರ್ಷಗಳಿಂದ ಭಾರತ ಪುರುಷರ ತಂಡ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.
ಇನ್ನೂ ಭಾರತ ಮಹಿಳಾ ತಂಡವು ಇದುವರೆಗೆ ಯಾವುದೇ ವಿಶ್ವಕಪ್ ಗೆದ್ದಿಲ್ಲ. ಮಹಿಳಾ ಹಾಕಿ ವಿಶ್ವಕಪ್ ಆರಂಭವಾದ 1974ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ತಂಡವು ನೀಡಿದ ಪ್ರದರ್ಶನವೇ ಇಂದಿಗೂ ಅವರ ಸಾರ್ವಕಾಲಿಕ ಶ್ರೇಷ್ಠ ಸಾಧನೆಯಾಗಿದೆ. ಅಂದು ಭಾರತ ತಂಡವು 4ನೇ ಸ್ಥಾನ ಪಡೆದುಕೊಂಡಿತ್ತು. 2022ರ ಹಿಂದಿನ ಆವೃತ್ತಿಯಲ್ಲಿ ಭಾರತ ಮಹಿಳಾ ತಂಡವು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಮಹಿಳಾ ತಂಡವು ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿಯ ಕನಸಿನೊಂದಿಗೆ ಕಣಕ್ಕಿಳಿಯುತ್ತಿದೆ.

ಭಾರತದ ಮಹಿಳಾ, ಪುರುಷರ ಪಂದ್ಯಗಳ ವೇಳಾಪಟ್ಟಿ:
ಈ ಬಾರಿಯ ಹಾಕಿ ವಿಶ್ವಕಪ್‌ನಲ್ಲಿ ಭಾರತದ ಪುರುಷರ ತಂಡವು ತನ್ನ ಮೊದಲ ಪಂದ್ಯವನ್ನು ಆಗಸ್ಟ್ 15 ರಂದು ಸಂಜೆ 4:30ಕ್ಕೆ ವೇಲ್ಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ನಂತರ ಆಗಸ್ಟ್ 17 ರಂದು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಹಾಗೂ ಆಗಸ್ಟ್ 19 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸಂಜೆ 6:30ಕ್ಕೆ ಕಣಕ್ಕಿಳಿಯಲಿದೆ.
ಮತ್ತೊಂದೆಡೆ, ಭಾರತದ ಮಹಿಳಾ ತಂಡವು ಆಗಸ್ಟ್ 16 ರಂದು ಸಂಜೆ 4:30ಕ್ಕೆ ಚೀನಾ ವಿರುದ್ಧ ಸೆಣಸುವ ಮೂಲಕ ತನ್ನ ಪಯಣ ಶುರುಮಾಡಲಿದೆ. ಮುಂದುವರಿದು, ಆಗಸ್ಟ್ 18 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಆಗಸ್ಟ್ 20 ರಂದು ಇಂಗ್ಲೆಂಡ್ ವಿರುದ್ಧ ಸಂಜೆ 6:30ಕ್ಕೆ ತನ್ನ ಗ್ರೂಪ್ ಹಂತದ ಪಂದ್ಯಗಳನ್ನು ಆಡಲಿದೆ.

ಈ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ (Star Sports Network) ಮೂಲಕ ವೀಕ್ಷಿಸಬಹುದು. ಜೊತೆಗೆ, ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ (Jio Hotstar) ನೇರಪ್ರಸಾರ ಲಭ್ಯವಿರುತ್ತದೆ.
