ನವದೆಹಲಿ: ಕಾವೇರಿ ನದಿ (Cauvery Water) ನೀರಿನ ಹಂಚಿಕೆ ಕುರಿತು ಮಹತ್ವದ ಬೆಳವಣಿಗೆಯಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆ ಮಂಗಳವಾರ ದೆಹಲಿಯಲ್ಲಿ ನಡೆಯಲಿದ್ದು, ಕರ್ನಾಟಕ (Karnataka) ಮತ್ತು ತಮಿಳುನಾಡು ತಮ್ಮ ತಮ್ಮ ವಾದಗಳನ್ನು ಮಂಡಿಸಲಿವೆ.
ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ತೀವ್ರ ಕೊರತೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ (Tamil Nadu) ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದ್ದು, ಸಂಕಷ್ಟ ಸೂತ್ರ ಅನುಸರಿಸುವಂತೆ ಸಮಿತಿಗೆ ಮನವಿ ಮಾಡಲಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಒಳಹರಿವಿನಲ್ಲಿ ಭಾರೀ ಕುಸಿತ
ಮತ್ತೊಂದೆಡೆ, ಕಾವೇರಿ ನೀರು ಹಂಚಿಕೆ ವೇಳಾಪಟ್ಟಿಯಂತೆ ತನ್ನ ಪಾಲಿನ ನೀರನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ಪಟ್ಟು ಹಿಡಿದಿದೆ. ಜೂನ್ ತಿಂಗಳಿಗೆ 9.19 ಟಿಎಂಸಿ ಹಾಗೂ ಜುಲೈ ತಿಂಗಳಿಗೆ 31.24 ಟಿಎಂಸಿ ಸೇರಿ ಒಟ್ಟು 40.43 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕೆಂಬುದು ತಮಿಳುನಾಡಿನ ವಾದವಾಗಿದೆ.
ಆದರೆ, ಕಳೆದ ಎರಡು ತಿಂಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕೇವಲ ಸುಮಾರು 4 ಟಿಎಂಸಿ ನೀರು ಮಾತ್ರ ಹರಿದಿದ್ದು, ಉಳಿದ ಪ್ರಮಾಣದ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ತಮಿಳುನಾಡು ಸಮಿತಿಯ ಮುಂದೆ ಒತ್ತಾಯಿಸಲಿದೆ.

ಇದಕ್ಕೆ ಪ್ರತಿಯಾಗಿ, ರಾಜ್ಯದ ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಸದ್ಯ ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ನೀರು ಲಭ್ಯವಿದೆ ಎಂದು ಕರ್ನಾಟಕ ವಾದಿಸಲಿದೆ. ಕೃಷಿ ಉದ್ದೇಶಕ್ಕೂ ನೀರನ್ನು ಬಳಸುತ್ತಿಲ್ಲ. ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ಕುಡಿಯುವ ನೀರು ಪೂರೈಸುವುದೇ ಈಗ ಮೊದಲ ಆದ್ಯತೆ ಎಂದು ರಾಜ್ಯ ತನ್ನ ನಿಲುವು ಮಂಡಿಸಲಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ ಕೆಆರ್‌ಎಸ್‌ಗೆ 5,000 ಕ್ಯೂಸೆಕ್ ಒಳಹರಿವು ಹೆಚ್ಚಳ
ಇನ್ನೂ ಮುಂದಿನ ದಿನಗಳಲ್ಲಿ ಸಮರ್ಪಕ ಮುಂಗಾರು ಮಳೆಯಾಗುವ ವಿಶ್ವಾಸವೂ ಇಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿಂದ ನೀರಿನ ಲಭ್ಯತೆ ಸಾಧ್ಯವಾಗಲಿದ್ದು, ಕರ್ನಾಟಕಕ್ಕೆ ಮುಂಗಾರು ಕೈಕೊಟ್ಟಿರುವುದರಿಂದ ಈಗಿನ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂಬ ವಾದವನ್ನು ರಾಜ್ಯ ಮುಂದಿರಿಸಲಿದೆ.
ಉಭಯ ರಾಜ್ಯಗಳ ವಾದಗಳನ್ನು ಆಲಿಸಿದ ಬಳಿಕ, ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಬಿಡುಗಡೆ ಮಾಡಬೇಕು ಎಂಬ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಗಣನೀಯ ಏರಿಕೆ
