ಬೆಂಗಳೂರು: ನಟಿ ಕೃಷಿ ತಾಪಂಡ(Krishi Thapanda) ಅವರ ಆರ್‌ಆರ್ ನಗರದಲ್ಲಿರುವ ಎಲಿಗೇಟ್ ಅಪಾರ್ಟ್‌ಮೆಂಟ್‌ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದ ಗೆಳೆಯ, ಉದ್ಯಮಿ ವೈಶಾಖ್(45) ಈ ಹಿಂದೆ ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು.
ಆಟೊಮೊಬೈಲ್ ಮತ್ತು ಗ್ಯಾರೇಜ್ ಉದ್ಯಮ ನಡೆಸುತ್ತಿದ್ದ ವೈಶಾಖ್‌ಗೆ(Vaishak) 15 ವರ್ಷಗಳ ಹಿಂದೆ ಮದುವೆಯಾಗಿದ್ದು, 14 ವರ್ಷದ ಒಬ್ಬ ಮಗನಿದ್ದಾನೆ. ಆದರೆ, ಇತ್ತೀಚೆಗೆ ಎವಿಆರ್ (AVR) ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಅವರಿಗೆ 7 ಕೋಟಿ ರೂಪಾಯಿ ಬೇಡಿಕೆಯಿಟ್ಟು ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್ ಸಿಲುಕಿಕೊಂಡಿದ್ದರು.
ನಟಿ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದ ರೆಡ್ಡಿ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅರವಿಂದ ರೆಡ್ಡಿಗೆ ಜೀವಬೆದರಿಕೆ ಪತ್ರವೊಂದು ಬಂದಿತ್ತು. ಪೊಲೀಸರ ದಿಕ್ಕು ತಪ್ಪಿಸಲು ಬನಶಂಕರಿಯ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಈ ಪತ್ರ ಕಳುಹಿಸಲಾಗಿತ್ತು. ತನಿಖೆ ನಡೆಸಿದ ಹೆಚ್‌ಎಎಲ್ (HAL) ಪೊಲೀಸರು ಕೊರಿಯರ್ ಮಾಡಿದ್ದ ಗ್ಯಾರೇಜ್ ಬಾಲಕನನ್ನು ವಶಕ್ಕೆ ಪಡೆದಾಗ, ಆತ ತನ್ನ ಬಾಸ್ ವೈಶಾಖ್ ಹೇಳಿದ್ದಾಗಿ ಬಾಯ್ಬಿಟ್ಟಿದ್ದ.
ನಟಿ ಕೃಷಿ ತಾಪಂಡ ಜೊತೆ ಸೇರಿ ಪ್ರೀ-ಪ್ಲ್ಯಾನ್ ಮಾಡಿ, ಉದ್ಯಮಿಯ ಹೆಸರು ಹಾಳುಗೆಡವಿ 7 ಕೋಟಿ ರೂ. ದೋಚಲು ವೈಶಾಖ್ ಸ್ಕೆಚ್ ಹಾಕಿದ್ದ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು ವೈಶಾಖ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಉದ್ಯಮಿ ಅರವಿಂದ ರೆಡ್ಡಿ ಕೇಸ್‌ನಲ್ಲಿ ಜೈಲು ಸೇರಿ ಬಂದಿದ್ದ ವಿಚಾರಕ್ಕೆ ಪತ್ನಿ ಹಾಗೂ ವೈಶಾಖ್ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಪತ್ನಿಯೊಂದಿಗಿನ ವೈಮನಸ್ಸಿನಿಂದ ಬೇಸತ್ತಿದ್ದ ವೈಶಾಖ್, ಆಗಾಗ ನಟಿ ಕೃಷಿ ತಾಪಂಡ ಅವರ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದರು. ಅದೇ ರೀತಿ ನಿನ್ನೆ ರಾತ್ರಿಯೂ ಕೃಷಿ ಅವರ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು ಎನ್ನಲಾಗುತ್ತಿದೆ.
ನಟಿ ಕೃಷಿ ತಾಪಂಡ ಅವರು ನೆಲಮಂಗಲಕ್ಕೆ ತೆರಳಿದ್ದರು. ಅಲ್ಲಿಂದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ನಟಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ವೈಶಾಖ್ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ.
