ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೋಲಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರಣ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ 2,05,072 ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಕಾರಣ ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ವಿನಯ್ ಕುಲಕರ್ಣಿ ಸಪೋರ್ಟರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ, ವಿನಯ್ ಕುಲಕರ್ಣಿ ಸೋಲಿಗೆ ನೇರವಾಗಿ ದಿನೇಶ್ ಗುಂಡೂರಾವ್ ಹಾಗು ಆರ್ ವಿ ದೇಶಪಾಂಡೆ ಕಾರಣ ಏಕೆಂದರೆ ವಿನಯ್ ಕುಲಕರ್ಣಿಯವರ ಹೆಸರು ಬೇಗ ಹೈಕಮಾಂಡ್ ಕಳಿಸದೆ ತಮ್ಮ ಬ್ರಾಹ್ಮಣ ಜಾತಿಯ ವ್ಯಕ್ತಿ ಜೋಶಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ಚುನಾವಣೆಯ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ್ದಲ್ಲದೆ ಮುಸ್ಲಿಂ ಧರ್ಮದವರ ಹೆಸರನ್ನು ಮಧ್ಯಕ್ಕೆ ತಂದು ಅವರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಪ್ರಹ್ಲಾದ್ ಜೋಶಿ ಗೆಲುವುವಿಗಾಗಿ ಮಾಧ್ಯಮದವರ ಮುಂದೆ ಅವರನ್ನು ಹೊಗಳಿದ್ದರು ಎಂದು ಬರೆದುಕೊಂಡಿದ್ದಾರೆ.

ಇಂತಹ ನಾಯಕರಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ? ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಿ ಪಕ್ಷವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *