– ರಾಜ್ಯಪಾಲರ ಮುಂದೆ ವಿಜಯ್ ಬಹುಮತ ಸಾಬೀತು
ಚೆನ್ನೈ: ತಮಿಳುನಾಡಿನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಮ್ಯಾಜಿಕ್ ನಂಬರ್‌ಗಾಗಿ ಹೆಣಗಾಡುತ್ತಿದ್ದ ವಿಜಯ್ ಸರ್ಕಾರ ರಚನೆಯ ಹಾದಿ ಕೊನೆಗೂ ಸುಗಮವಾಗಿದೆ. ನಟ-ರಾಜಕಾರಣಿ ನಾಳೆ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
108 ಸ್ಥಾನ ಗೆದ್ದ ಟಿವಿಕೆಗೆ ಸಿಪಿಐ, ಸಿಪಿಐಎಂ, ವಿಸಿಕೆ, ಮುಸ್ಲಿಂ ಲೀಗ್ ಬೆಂಬಲ ನೀಡಿದೆ. ಇದರೊಂದಿಗೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಸರ್ಕಾರ ರಚನೆ ಕಸರತ್ತಿಗೆ ಬ್ರೇಕ್ ಬಿದ್ದಿದೆ. 2 ಬಾರಿ ರಾಜ್ಯಪಾಲರನ್ನು ಭೇಟಿಯಾಗಿದ್ದ ವಿಜಯ್‌ಗೆ ರಾಜ್ಯಪಾಲ ಅರ್ಲೇಕರ್ ಬಹುಮತದ ಸಾಕ್ಷಿ ತೋರಿಸಿ ಎಂದು ವಾಪಸ್ ಕಳಿಸಿದ್ದರು. ಇವತ್ತು 3ನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ಟಿವಿಕೆಗೆ ಬೆಂಬಲ ನೀಡಿದ ಪಕ್ಷಗಳ ಬೆಂಬಲ ಪತ್ರ ನೀಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು. ರಾಜ್ಯಪಾಲರಿಗೆ ವಿಜಯ್ 120 ಶಾಸಕರ ಬೆಂಬಲ ತೋರಿಸಿದ್ದಾರೆ.
ಭೇಟಿ ವೇಳೆ ವಿಜಯ್‌ಗೆ ಶೇಕ್ ಹ್ಯಾಂಡ್ ಕೊಟ್ಟು ರಾಜ್ಯಪಾಲರು ಬೆನ್ನು ತಟ್ಟಿದರು. ನಂತರ ರಾಜ್ಯಪಾಲರಿಗೆ ಶಾಲು ಹೊದಿಸಿ ಹೂಗುಚ್ಛ ಕೊಟ್ಟು ವಿಜಯ್ ಸನ್ಮಾನಿಸಿದರು. ಬಳಿಕ ಕೂತು ಕೆಲ ಕ್ಷಣ ಸೌಹಾರ್ದಯುತ ಮಾತುಕತೆ ನಡೆಸಿದರು. ಬಳಿಕ ಎದ್ದು ನಿಂತು ವಿಜಯ್ ಬೆಂಬಲ ಪತ್ರ ಕೊಟ್ಟರು.
3ನೇ ಭೇಟಿಯಲ್ಲಿ ವಿಜಯ್ ಸಕ್ಸಸ್ ಆಗಿದ್ದು, ಲೋಕಭವನದಿಂದ ನಗುಮುಖದೊಂದಿಗೆ ಹೊರಬಂದಿದ್ದಾರೆ. ವಿಜಯ್ 120 ಶಾಸಕರ ಬೆಂಬಲ ಪತ್ರ ತೋರಿಸಿದ ಬೆನ್ನಲ್ಲೇ ಪ್ರಮಾಣ ವಚನಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ವಿಜಯ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟಿವಿಕೆ ಪರವಾಗಿ ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಅಖಾಡಕ್ಕಿಳಿದಿದ್ದರು. ವಾಟ್ಸಾಪ್‌ನಲ್ಲಿ ಟಿವಿಕೆ ಬೆಂಬಲ ಕೋರಿದ್ದಕ್ಕೆ ಅಸಮಾಧಾನಗೊಂಡಿದ್ದ ವಿಸಿಕೆ ಜೊತೆ ಮೈತ್ರಿ ಮಾತುಕತೆ ನಡೆಸಿದರು. ಸರ್ಕಾರ ರಚನೆಗೆ ವಿಜಯ್ ಹಾದಿ ಸುಗಮವಾದ ಬೆನ್ನಲ್ಲೇ ನಾಳೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.

